ಬ್ಯಾಂಕಾಂಕ್: ಥೈಲ್ಯಾಂಡ್ ಶಾಲೆಗಳಲ್ಲಿ ಪ್ರತಿದಿನ ಬೆಳಗ್ಗೆ 8 ಗಂಟೆಗೆ ರಾಷ್ಟ್ರಗೀತೆ ಹಾಡಲಾಗುತ್ತದೆ. ವಿದ್ಯಾರ್ಥಿಗಳು ಗೌರವ ಸಲ್ಲಿಸಲು ಸ್ಥಿರವಾಗಿ ನಿಲ್ಲುತ್ತಾರೆ. ಆದರೆ, ಥಾಯ್ ಶಾಲೆಯೊಂದರ ಇತ್ತೀಚಿನ ವಿಡಿಯೊವೊಂದು ಹಾಸ್ಯಾಸ್ಪದ ಕಾರಣಕ್ಕಾಗಿ ವೈರಲ್(Viral Video) ಆಗಿದೆ. ಮೂಲತಃ ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ, ದೇಶಗೀತೆ ಪ್ರಾರಂಭವಾಗುತ್ತಿದ್ದಂತೆ ಬಾಲಕನೊಬ್ಬ ನಡಿಗೆಯ ಮಧ್ಯದಲ್ಲಿ ಪ್ರತಿಮೆ ತರಹ ನಿಂತು ಬಿಟ್ಟಿದ್ದಾನೆ.
ಸದ್ಯ, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವು ನೆಟ್‌ಫ್ಲಿಕ್ಸ್‌ನ ಸ್ಕ್ವಿಡ್ ಗೇಮ್‌ನ ಪ್ರಸಿದ್ಧ 'ರೆಡ್ ಲೈಟ್, ಗ್ರೀನ್ ಲೈಟ್' ಸವಾಲನ್ನು ವೀಕ್ಷಕರಿಗೆ ತಕ್ಷಣವೇ ನೆನಪಿಸಿತು. ಮೊದಲ ನೋಟದಲ್ಲಿ, ಇದು ಒಂದು ಛಾಯಾಚಿತ್ರದಂತೆ ಕಾಣುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಿಂದೆ ನಿಂತಿದ್ದರೆ, ವಿದ್ಯಾರ್ಥಿಯೊಬ್ಬ ಸ್ಕೂಲ್ ಬ್ಯಾಗ್ ಹಿಡಿದು ಪ್ರತಿಮೆ ತರಹ (ನಡೆಯುವ ರೀತಿಯಲ್ಲಿ) ನಿಂತಿದ್ದಾನೆ. ಆದರೆ, ಅದು ಫೋಟೋವಲ್ಲ, ವಿಡಿಯೊ ದೃಶ್ಯವಾಗಿದೆ. ರಾಷ್ಟ್ರಗೀತೆ ಮುಗಿದ ತಕ್ಷಣ, ಅವನು ಮುಂದೆ ನಡೆದಿದ್ದಾನೆ.
ವಿಡಿಯೊ ವೀಕ್ಷಿಸಿ:
ಸದ್ಯ, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು, ಬಾಲಕ ತನ್ನ ದೇಶವನ್ನು ತುಂಬಾ ಪ್ರೀತಿಸುತ್ತಾನೆ ಎಂಬುದು ಇದರಲ್ಲೇ ತಿಳಿಯುತ್ತದೆ ಎಂದು ಬರೆದಿದ್ದಾರೆ. ಪುಟ್ಟ ಮಗು ಚಿತ್ರಕಲೆಯಂತೆ ಕಾಣುತ್ತದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಪಾರ ದೇಶಭಕ್ತಿ ಹೊಂದಿದ್ದಾನೆ ಎಂದು ಬಳಕೆದಾರರೊಬ್ಬರು ತಿಳಿಸಿದರು. ತರಗತಿಗೆ ಯಾರು ತಡವಾಗಿ ಬಂದಿದ್ದಾರೆಂದು ಈಗ ನಮಗೆ ತಿಳಿದಿದೆ ಎಂದು ಒಬ್ಬ ವ್ಯಕ್ತಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷವೂ ಇದೇ ರೀತಿಯ ವಿಡಿಯೊ ವೈರಲ್ ಆಗಿತ್ತು. ಆ ವಿಡಿಯೊದಲ್ಲಿ, ಒಬ್ಬ ಶಾಲಾ ಬಾಲಕ ಬಲಗೈ ಮುಂದಕ್ಕೆ ಚಾಚಿ ನೀರಿನ ಬಾಟಲಿಯನ್ನು ಹಿಡಿದುಕೊಂಡು, ಒಂದು ಪಾದವನ್ನು ಎತ್ತಿದ್ದಾನೆ. ಕೆಲಹೊತ್ತು ಚಲಿಸದೆ ಅದೇ ಭಂಗಿ ಪ್ರದರ್ಶಸಿದ್ದಾನೆ. ಅವನ ಹಿಂದೆ ನಡೆಯುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಅವನನ್ನು ಗಮನಿಸಿ, ದೃಶ್ಯವನ್ನು ಚಿತ್ರೀಕರಿಸಿದ್ದ. ನಂತರ ತನ್ನ ನಡಿಗೆಯನ್ನು ಮುಂದುವರೆಸಿದ್ದ.