ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saiyaara Movie: ಐವಿ ಡ್ರಿಪ್ಸ್ ಹಾಕಿಕೊಂಡು ʼಸೈಯಾರʼ ಸಿನಿಮಾ ನೋಡಲು ಬಂದ ಅಭಿಮಾನಿ

Viral Video: ಐವಿ ಡ್ರಿಪ್ಸ್ ಹಾಕಿಕೊಂಡು ವ್ಯಕ್ತಿಯೊಬ್ಬ 'ಸೈಯಾರ' ಹಿಂದಿ ಸಿನಿಮಾ ನೋಡಲು ಥಿಯೇಟರ್‌ಗೆ ಬಂದ ಘಟನೆ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆತನ ವಿಡಿಯೊ ನೋಡಿ ಮೊದಲು ಹೋಗಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿದ್ದಾರೆ.

ಮುಂಬೈ; ಐವಿ ಡ್ರಿಪ್ಸ್ (IV drip) ಹಾಕಿಕೊಂಡು ವ್ಯಕ್ತಿಯೊಬ್ಬ 'ಸೈಯಾರ' (Saiyaara) ಬಾಲಿವುಡ್‌ ಸಿನಿಮಾ ನೋಡಲು ಥಿಯೇಟರ್‌ ಆಗಮಿಸಿದ ಘಟನೆ ನಡೆದಿದೆ. ಇದರ ವಿಡಿಯೊ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಮೊದಲು ಹೋಗಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಅಹಾನ್ ಪಾಂಡೆ (Ahaan Panday) ಮತ್ತು ಅನೀತ್ ಪಡ್ಡಾ (Aneet Padda) ಅಭಿನಯದ ʼಸೈಯಾರಾʼ ಚಿತ್ರ ದೇಶದೆಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಭಾವೋದ್ರಿಕ್ತ ಪ್ರೇಮಕಥೆಯ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೆಚ್ಚು ಸದ್ದುಗದ್ದಲವಿಲ್ಲದೆ ತೆರೆಗೆ ಬಂದ ಈ ಚಿತ್ರವು ಮೊದಲ ದಿನದ ದಾಖಲೆಯ ಕಲೆಕ್ಷನ್‌ ಮಾಡಿದೆ. 21.25 ಕೋಟಿ ರೂ. ಬಾಚಿಕೊಂಡಿತ್ತು. ದೇಶಾದ್ಯಂತದ ಯುವ ಅಭಿಮಾನಿಗಳನ್ನು ಸೆಳೆದಿರುವ ಈ ಚಿತ್ರ ವೀಕ್ಷಣೆಗೆ ಸಾಕಷ್ಟು ಮಂದಿ ದೂರದೂರುಗಳಿಂದಲೂ ಬರುತ್ತಿದ್ದಾರೆ. ಈ ನಡುವೆ ಐವಿ ಡ್ರಿಪ್‌ ಹಾಕಿಕೊಂಡು ವ್ಯಕ್ತಿಯೊಬ್ಬ ಚಿತ್ರಮಂದಿರಕ್ಕೆ ಬಂದಿದ್ದು, ಎಲ್ಲರ ಗಮನ ಸೆಳೆದಿದ್ದಾನೆ.

ರೆಡ್ಡಿಟ್‌ನಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಕೈಗೆ ಐವಿ ಡ್ರಿಪ್ ಜೋಡಿಸಿಕೊಂಡು ʼಸೈಯಾರಾʼ ಚಿತ್ರ ವೀಕ್ಷಿಸುತ್ತಿರುವುದನ್ನು ಕಾಣಬಹುದು. ಚಿತ್ರ ನೋಡಿ ಆತ ಕಣ್ಣೀರು ಹಾಕಿರುವುದನ್ನು ಆತನ ಸ್ನೇಹಿತರು ಚಿತ್ರೀಕರಿಸಿದ್ದಾರೆ.

ಇನ್ನೊಂದು ವಿಡಿಯೊದಲ್ಲಿ ಆತ ತಡರಾತ್ರಿಯಲ್ಲಿ ನಿರ್ಜನ ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಐವಿ ಡ್ರಿಪ್ಸ್ ಆತನ ಕೈಯಲ್ಲಿ ನೇತಾಡುತ್ತಿದೆ. ಈ ನಡುವೆಯೇ ಆತ ʼಸೈಯಾರʼ ಚಿತ್ರದ ಶೀರ್ಷಿಕೆ ಗೀತೆ ಹಾಡುತ್ತಿದ್ದಾನೆ. ಈತನನ್ನು ಮಹಾರಾಷ್ಟ್ರದ ಸತಾರದವ ಫೈಸಲ್ ಎಂದು ಗುರುತಿಸಲಾಗಿದೆ.

ಆತನ ವಿಡಿಯೊ ನೋಡಿ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬರು ಕಮೆಂಟ್‌ನಲ್ಲಿ ನೀವು ಅಸ್ವಸ್ಥರು. ದೇವರ ಬಗ್ಗೆ ಯೋಚಿಸಿ, ʼಸೈಯಾರʼ ಬಗ್ಗೆ ಅಲ್ಲ ಎಂದು ಹೇಳಿದ್ದರೆ ಇನ್ನೊಬ್ಬರು ಚಿತ್ರ ನೋಡುವುದಕ್ಕಾಗಿ ಅವರು ಆಸ್ಪತ್ರೆಯಿಂದ ಬಂದಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಬ್ಬರು ಚಿತ್ರ ನೋಡಿ ಕಣ್ಣೀರು ಹಾಕುವುದು ಯೋಗ್ಯವಲ್ಲ ಎಂದಿದ್ದರೆ ಇನ್ನೊಬ್ಬರು ಭಾರತೀಯ ಯುವಕರು ನಾಶವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Physical Abuse: ಗಾಢ ನಿದ್ದೆಯಲ್ಲಿರುವಾಗಲೇ ಅತ್ಯಾಚಾರ! ಪತಿ ವಿರುದ್ಧ ಮಾಜಿ ಸಂಸದೆಯಿಂದ ಗಂಭೀರ ಆರೋಪ

ʼಸೈಯಾರʼ

ಹೊಸ ಪ್ರತಿಭೆ ಅಹಾನ್ ಪಾಂಡೆ ನಾಯಕನಾಗಿ ನಟಿಸಿರುವ ʼಸೈಯಾರʼ ಚಿತ್ರ ಬಿಡುಗಡೆಯ ಮೊದಲ ದಿನವೇ ದೇಶಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 21.25 ಕೋಟಿ ರೂ. ಸಂಗ್ರಹಿಸಿದೆ. ಮೋಹಿತ್ ಸೂರಿ ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದೆ. ʼಬಿಗ್ ಗರ್ಲ್ಸ್ ಡೋಂಟ್ ಕ್ರೈʼ ಎಂಬ ವೆಬ್ ಸರಣಿ ಮತ್ತು ಕಾಜೋಲ್ ಅಭಿನಯದ ʼಸಲಾಮ್ ವೆಂಕಿʼ ಚಿತ್ರದಲ್ಲಿ ನಟಿಸಿರುವ ಅನೀತ್ ಪಡ್ಡಾ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಏಕಕಾಲಕ್ಕೆ 8,000 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿರುವ ʼಸೈಯಾರʼ ನಿರ್ದೇಶಕ ಸೂರಿಯ ವೃತ್ತಿಜೀವನದ ಅತ್ಯುತ್ತಮ ಆರಂಭ ಎಂದೇ ಪರಿಗಣಿಸಲಾಗಿದೆ. ಯಾವುದೇ ಪ್ರಚಾರ ಮಾಡದೇ ಅತ್ಯುತ್ತಮ ಪ್ರದರ್ಶನ ಕಂಡ ಈ ಚಿತ್ರ ಮೊದಲ ದಿನವೇ ಕೋಟ್ಯಂತರ ರೂ. ಆದಾಯ ಗಳಿಸಿ ದಾಖಲೆ ಬರೆದಿದೆ.

ವಿದ್ಯಾ ಇರ್ವತ್ತೂರು

View all posts by this author