ಮುಂಬೈ,ಜೂ. 1: ಇತ್ತೀಚೆಗೆ ಮಕ್ಕಳ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸುವುದು ಸಾಮಾನ್ಯ. ಜತೆಗೆ ಪ್ರಾಣಿಗಳ ಹುಟ್ಟುಹಬ್ಬ ಆಚರಣೆ ಕೂಡ ಟ್ರೆಂಡ್ ಆಗಿ ಬಿಟ್ಟಿದೆ. ಮಹಾರಾಷ್ಟ್ರದ ಮುಂಬೈಯ ಕಂಟೆಂಟ್ ಕ್ರಿಯೇಟರ್ ಒಬ್ಬರು ತಮ್ಮ ಮುದ್ದಿನ ಬೆಕ್ಕಿನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು ಭಾರೀ ವೈರಲ್ (Viral News) ಆಗಿದೆ. ಈ ದೃಶ್ಯ ಸಾಕುಪ್ರಾಣಿಯ ಹುಟ್ಟುಹಬ್ಬದಂತೆ ಇರಲಿಲ್ಲ. ಬದಲಾಗಿ ದೊಡ್ಡ ಮಟ್ಟದ ಉತ್ಸವದಂತೆ ಕಾಣುತ್ತಿತ್ತು. ಈ ಆಚರಣೆಯಲ್ಲಿ ಕೇಕ್ ಕತ್ತರಿಸುವುದು, ಸಂಗೀತ, ನೃತ್ಯ ಇದ್ದು ಅತಿಥಿಗಳಿಗೆ ಹಬ್ಬದ ವಾತಾವರಣದಂತಿತ್ತು.
ಸಾಕು ಪ್ರಾಣಿಗಳಾದ ನಾಯಿ, ಬೆಕ್ಕಿನ ಹುಟ್ಟುಹಬ್ಬ ಆಚರಿಸುವ ಅನೇಕ ವಿಡಿಯೊ ವೈರಲ್ ಆಗಿರುವುದನ್ನು ನೀವು ನೋಡಿರಬಹುದು. ಇದೀಗ ಬೆಕ್ಕಿನ ಹುಟ್ಟುಹಬ್ಬ ಆಚರಣೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿಡಿಯೊ ಬೆಕ್ಕು ಮತ್ತು ಮಾಲಕ ಅಭಿನವ್ ಪಕ್ಕದಲ್ಲಿ ಹುಟ್ಟುಹಬ್ಬದ ಕೇಕ್ ಮುಂದೆ ಕುಳಿತಿರುವುದನ್ನು ತೋರಿಸುವ ಮೂಲಕ ಪ್ರಾರಂಭವಾಗುತ್ತದೆ. ಸ್ನೇಹಿತರು ಮತ್ತು ಕುಟುಂಬದವರು ಸುತ್ತಲೂ ಸೇರಿದ್ದು ಬೆಕ್ಕು ಅಚ್ನೋಚರಿಯಿಂದ ನೋಡುತ್ತಿತ್ತು. ಜನರ ಚಪ್ಪಾಳೆ ನಡುವೆ ಕೇಕ್ ಕತ್ತರಿಸಲಾಯಿತು.
ವಿಡಿಯೊ ನೋಡಿ:
ಈ ಸಂದರ್ಭದಲ್ಲಿ ಬೆಕ್ಕು ಶಾಂತವಾಗಿ ಕುಳಿತುಕೊಂಡಿದೆ. ಸುತ್ತಲೂ ನೆರೆದಿದ್ದ ನೂರಾರು ಜನ ಚಪ್ಪಾಳೆ ತಟ್ಟಿ, ಹಾಡು ಹಾಡಿ ಡ್ಯಾನ್ಸ್ ಮಾಡಿದ್ದಾರೆ. ಕೇಕ್ ಕತ್ತರಿಸುವಾಗಲೂ ಬೆಕ್ಕು ಯಾವುದೇ ರೀತಿ ಭಯ ಪಡದೇ ಆರಾಮವಾಗಿ ಕುಳಿತಿದೆ. ಅಷ್ಟೆ ಅಲ್ಲದೆ ಬೆಕ್ಕಿನ ಬೃಹತ್ ಹುಟ್ಟುಹಬ್ಬದ ಬ್ಯಾನರ್ ಅನ್ನು ಕುಟುಂಬದ ಬಾಲ್ಕನಿಯಲ್ಲಿ ಪ್ರದರ್ಶಿಸಲಾಯಿತು. ಅತಿಥಿಗಳು ಸಂಗೀತಕ್ಕೆ ಉತ್ಸಾಹದಿಂದ ನೃತ್ಯ ಮಾಡಿದ್ದಾರೆ. ಜತೆಗೆ ಬಂದವರಿಗೆಲ್ಲ ಭರ್ಜರಿ ಆಹಾರ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ವಾಕಿಂಗ್ ಹೋಗಿದ್ದವರ ಬೆನ್ನಟ್ಟಿದ ಕರಡಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರು, ʼʼಬೆಕ್ಕು ಬಹಳ ಅದೃಷ್ಟ ಮಾಡಿದೆʼʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಇಷ್ಟು ಗ್ರ್ಯಾಂಡ್ ತನ್ನ ಮದುವೆಯೂ ಆಗಿಲ್ಲʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.