ತಿರುವನಂತಪುರ: ಸಾಮಾನ್ಯವಾಗಿ ಶಾಲೆಗಳಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ಒಬ್ಬರಿಗಿಂತ ಒಬ್ಬರು ವಿಭಿನ್ನವಾದ ವೇಷ ಧರಿಸಿ ವೇದಿಕೆಗೆ ಆಗಮಿಸುತ್ತಾರೆ. ಇದೀಗ ಕೇರಳದಲ್ಲಿ ನಡೆದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಬಾಲಕನೊಬ್ಬನ ಅದ್ಭುತ ಪ್ರದರ್ಶನ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಆತನ ಸೃಜನಶೀಲತೆಗೆ ಸಲಾಂ ಎಂದಿದ್ದಾರೆ.
ಅಡೂರಿನ ಆಲ್ ಸೇಂಟ್ಸ್ ಪಬ್ಲಿಕ್ ಶಾಲೆಯಲ್ಲಿ ನಡೆದ ಮಕ್ಕಳ ಛದ್ಮವೇಷದ ಸ್ಪರ್ಧೆಯ ಸಂದರ್ಭದಲ್ಲಿ ಚಿತ್ರೀಕರಿಸಲಾದ ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ kailash_mannady ಎಂಬುವವರು ಹಂಚಿಕೊಂಡಿದ್ದಾರೆ. ಇದರಲ್ಲಿ ಒಬ್ಬ ವಿದ್ಯಾರ್ಥಿ ತಲೆಯಿಂದ ಕಾಲಿನವರೆಗೆ ಉಷ್ಟ್ರಪಕ್ಷಿಯಂತೆ ವೇಷ ಧರಿಸಿದ್ದು ಕಂಡು ಬಂದಿದೆ. ಈತ ದೊಡ್ಡ ಕೊಕ್ಕು, ಗರಿಗಳಿರುವ ರೆಕ್ಕೆಗಳು ಮತ್ತು ಉದ್ದವಾದ ಕಾಲುಗಳನ್ನು ಹೊಂದಿದ್ದಾನೆ.
ಆಸ್ಟ್ರಿಚ್‌ನಂತೆ ವೇಷಭೂಷಣ ಧರಿಸಿದ ಕಾರಣ ವೇದಿಕೆಗೆ ಹೋಗಲು ಆತನಿಗೆ ಏನೂ ಕಾಣಿಸದೇ ಇದ್ದಿದ್ದರಿಂದ ಇಬ್ಬರು ಶಿಕ್ಷಕರು ಮಾರ್ಗದರ್ಶನ ನೀಡಿದ್ದಾರೆ. ಆಸ್ಟ್ರಿಚ್ ವೇಷಧಾರಿ ವೇದಿಕೆಯಲ್ಲಿ ನಡೆಯುತ್ತಿದ್ದಂತೆ ಜನಸಮೂಹವು ಹರ್ಷೋದ್ಗಾರ ಮೊಳಗಿಸಿತು. ಈ ವೇಳೆ ಆತ ಆಸ್ಟ್ರಿಚ್‌ನಂತೆ ಮೊಟ್ಟೆ ಇಡುವುದನ್ನು ಅಭಿನಯಿಸಿದ್ದಾನೆ. ಅದು ಹೇಗೆಂದರೆ ಬಲೂನ್‍ನನ್ನು ಮೊದಲೇ ತನ್ನ ಕಾಲುಗಳ ಮಧ್ಯೆ ಹಿಡಿದುಕೊಂಡಿದ್ದ. ವೇದಿಕೆಗೆ ಹತ್ತಿದ ಬಳಿಕ ಬಲೂನ್ ಅನ್ನು ಕೆಳಗೆ ಹಾಕಿದ್ದಾನೆ. ಈ ದೃಶ್ಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ.
ವಿಡಿಯೊ ವೀಕ್ಷಿಸಿ:
ಸದ್ಯ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಕೆಲವರು ಆತನಿಗೆ ಆಸ್ಕರ್ ಪ್ರಶಸ್ತಿ ನೀಡುವಂತೆ ಹೇಳಿದರೆ, ಇನ್ನೂ ಕೆಲವರು ಬಾಲಕನ ಸೃಜನಶೀತಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದು, ಸುಮಾರು 30 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಈ ಸುದ್ದಿಯನ್ನೂ ಓದಿ: Viral Video: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನಿಗೆ ಕಾದಿತ್ತು ಶಾಕ್; ಆಚಾನಕ್ಕಾಗಿ ಸ್ಫೋಟಗೊಂಡ ಕೇಕ್!