ಶ್ರೀನಗರ,ಜು.9: ಮಳೆಯ ತೀವ್ರತೆ ಕೆಲವೆಡೆ ಹೆಚ್ಚಾಗಿರುವುದರಿಂದ ದಿನ ನಿತ್ಯ ಅವಘಡಗಳು ಉಂಟಾಗುತ್ತಿವೆ. ಅದರಲ್ಲೂ ಪ್ರವಾಸಿ ಸ್ಥಳಕ್ಕೆ ಹೋಗುವ ಮುನ್ನ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹಳಷ್ಟು ಅಗತ್ಯ. ಇದೀಗ ಜಮ್ಮು ಮತ್ತು ಕಾಶ್ಮೀರದ ಖ್ಯಾತ ಗುರೇಜ್ ಕಣಿವೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರವಾಸಿಗರು ಕಾರಿನಿಂದ ಇಳಿದ ಕೆಲವೇ ಕ್ಷಣದಲ್ಲಿ ಕಾರು ಪ್ರಪಾತಕ್ಕೆ ಬಿದ್ದ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್, ಕಾರು ಬಿದ್ದಾಗ ಅದರೊಳಗೆ ಯಾರೂ ಇರಲಿಲ್ಲ. ಈ ಘಟನೆಯ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರು ಫೋಟೋ ಕ್ಲಿಕ್ಕಿಸಲೆಂದು ಕಾರಿನಿಂದ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಈ ದುರಂತ ಸಂಭವಿಸಿದೆ. ತಮ್ಮ ಬಿಳಿ ಬಣ್ಣದ ಕಾರನ್ನು ಇಳಿಜಾರಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಆದರೆ ಕಾರು ಇದ್ದಕ್ಕಿದ್ದಂತೆ ತಾನಾಗಿಯೇ ಹಿಂದಕ್ಕೆ ಚಲಿಸಲು ಪ್ರಾರಂಭಿ ಸಿದೆ. ಕಾರು ವೇಗವನ್ನು ಪಡೆಯುತ್ತಿದ್ದಂತೆ, ಪ್ರವಾಸಿಗರು ಇದನ್ನು ಗಮನಿಸಿದ್ದು ನಿಲ್ಲಿಸುವ ಪ್ರಯತ್ನದಲ್ಲಿ ಅದರ ಹಿಂದೆ ಓಡಿದ್ದಾರೆ.
ವಿಡಿಯೋ ನೋಡಿ:
ಜಮ್ಮು ಮತ್ತು ಕಾಶ್ಮೀರದ ಗುರೆಜ್‌ನಲ್ಲಿ ಈ ಘಟನೆ ನಡೆದಿದ್ದು, ವೈರಲ್ ಆದ ದೃಶ್ಯದಲ್ಲಿ ಕಾರ್ ಕೆಳಮುಖವಾಗಿ ಉರುಳುತ್ತಲೇ ಇತ್ತು. ಅಂತಿಮವಾಗಿ ರಸ್ತೆಬದಿಯೊಂದಕ್ಕೆ ಡಿಕ್ಕಿ ಹೊಡೆದು ಕೆಳಗಿನ ಇಳಿಜಾರಿನ ಮೂಲಕ ಕಣ್ಮರೆಯಾಯಿತು. ಕೊನೆಗೆ ಕಾರು ಇಳಿಜಾರಿನ ಆಳಕ್ಕೆ ಬಿದ್ದಿದೆ. ದೃಶ್ಯಾವಳಿ ಯನ್ನು ಬಳಕೆದಾರ ನಿಖಿಲ್ ಸೈನಿ ಅವರು ಎಂಬವರು ಹಂಚಿಕೊಂಡಿದ್ದಾರೆ, ಅವರು ಪರ್ವತ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡುವಾಗ ಮೂಲಭೂತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
"ನಿಮ್ಮ ಟೈರ್‌ಗಳ ಹಿಂದೆ ಸಣ್ಣ ಕಲ್ಲು ಇಡುವ ಮೂಲಕ ನಿಮ್ಮ ಕಾರನ್ನು ಉಳಿಸಬಹುದು" ದಯವಿಟ್ಟು, ಸ್ವಲ್ಪ ಸಾಮಾನ್ಯ ಜ್ಞಾನವನ್ನು ಇಂತಹ ಸ್ಥಳದಲ್ಲಿ ಬಳಸಿ ಎಂದು ಬರೆದು ಕೊಂಡಿದ್ದರು. ಈ ಬಗ್ಗೆ ನೆಟ್ಟಿಗರು ಭಯಗೊಂಡಿದ್ದು ಬಳಕೆದಾರರೊಬ್ಬರು, ಘಾಟ್ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವಾಗ ಹ್ಯಾಂಡ್‌ಬ್ರೇಕ್ ಹಾಕದಿರುವುದು ಕೂಡ ಇದಕ್ಕೆ ಕಾರಣ ಆಗಿರಬಹುದು ಎಂದಿದ್ದಾರೆ. ಮತ್ತೊಬ್ಬರು ಈ ದೃಶ್ಯ ನಿಜಕ್ಕೂ ಭಯಾನಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.