ಭೋಪಾಲ್, ಜು. 6: ಇತ್ತೀಚೆಗೆ ನಗರ ಪ್ರದೇಶಗಳು ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಗ್ರಾಮೀಣ ಪ್ರದೇಶದ ಅದೆಷ್ಟೋ ಹಳ್ಳಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಕುಡಿಯಲು ನೀರು, ಸಂಚರಿಸಲು ಯೋಗ್ಯ ರಸ್ತೆಯ ವ್ಯವಸ್ಥೆ ಇಲ್ಲದೆ ಪರದಾಡುವ ಅನೇಕ ಗ್ರಾಮಸ್ಥರಿದ್ದಾರೆ. ಇದೀಗ ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಅತ್ಯಂತ ನೋವಿನ ಘಟನೆಯೊಂದು ನಡೆದಿದೆ. ವಾಹನ ಸಂಚರಿಸಲು ಸೂಕ್ತ ರಸ್ತೆ ಇಲ್ಲದೆ ಕಾರಣ ಸಕಾಲಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಅನಾರೋಗ್ಯದಿಂದ ಬಳಲುತ್ತಿದ್ದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದ ಕಾರಣ ಮಂಚದ ಮೇಲೆ ಹೊತ್ತುಕೊಂಡು ಗ್ರಾಮಸ್ಥರು ಕರೆದೊಯ್ಯಲು ಮುಂದಾಗಿದ್ದರು. ಆದರೆ ಆಸ್ಪತ್ರೆಯನ್ನು ತಲುಪುವ ಮೊದಲೇ ಮಹಿಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಘಟನೆಯು ಮಧ್ಯ ಪ್ರದೇಶದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಶೇಷವೆಂದರೆ, ಮಧ್ಯ ಪ್ರದೇಶದ ಪ್ರಸ್ತುತ ಆರೋಗ್ಯ ಸಚಿವರು ಇದೇ ರೇವಾ ಜಿಲ್ಲೆಗೆ ಸೇರಿದವರು.
ವಿಡಿಯೊ ನೋಡಿ:
ವೈರಲ್ ಆದ ವಿಡಿಯೊದಲ್ಲಿ, ನಾಲ್ಕರಿಂದ ಐದು ಜನರು ಹೆಗಲ ಮೇಲೆ ಮಹಿಳೆಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಸರಿಯಾದ ರಸ್ತೆಯಿಲ್ಲದೆ ಅವರು ಕೆಸರಿನಿಂದ ಕೂಡಿದ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ
ನೂರಾರು ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ
ಇದರ ಹೊರತಾಗಿಯೂ, ಇಲ್ಲಿನ ಕೆಲವು ಜಿಲ್ಲೆಯ ಕೆಲವು ಭಾಗಗಳಲ್ಲಿ ಮೂಲಭೂತ ಆರೋಗ್ಯ ಸೌಲಭ್ಯಗಳು ಅಸಮರ್ಪಕವಾಗಿ ಉಳಿದಿವೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ನೆಟ್ಟಿಗರು ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದು, ರಾಜಕೀಯ ವ್ಯಕ್ತಿಗಳಿಗೆ ಇಂತಹ ಸಮಸ್ಯೆ ಕಣ್ಣಿಗೆ ಕಾಣಿಸಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.