ಬೆಂಗಳೂರು, ಸೆ. 6: ತಂತ್ರಜ್ಞಾನ ಹಾಗೂ ಗುಣಮಟ್ಟದ ಜೀವನ ಶೈಲಿಗೆ ಸಿಲಿಕಾನ್ ಸಿಟಿ ಹೆಸರುವಾಸಿಯಾದರೂ ಇಲ್ಲಿನ ಮೂಲಭೂತ ಸಮಸ್ಯೆಗೆ ಮಾತ್ರ ಕಡಿವಾಣ ಬಿದ್ದಿಲ್ಲ. ಅದರಲ್ಲೂ ಬೆಂಗಳೂರಿನ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್ ಹಾಗೂ ಗುಂಡಿ ಬಿದ್ದ ರಸ್ತೆಗಳ ಸಮಸ್ಯೆ ಹೊಸತಲ್ಲ. ಈ ಬಗ್ಗೆ ಹಲವರು ಧ್ವನಿ ಎತ್ತಿದರೂ ಪರಿಹಾರ ಸಿಕ್ಕಿಲ್ಲ. ಇದೀಗ ಇಲ್ಲಿನ ರಸ್ತೆಗಳ ದುಸ್ಥಿತಿ ಹಾಗೂ ಸಂಚಾರ ದಟ್ಟಣೆಗೆ ರೋಸಿಹೋದ ಮಹಿಳೆಯೊಬ್ಬರು ವಿಡಿಯೊ (Viral News) ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ವಾಸಿಸುವ ಜನರಿಗೆ, ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಗಳು ಮತ್ತು ಟ್ರಾಫಿಕ್‌ನ ಕಿರಿಕಿರಿ ದೈನಂದಿನ ಜೀವನದ ಅನಿವಾರ್ಯ ಭಾಗವಾಗಿದೆ. ಇದೀಗ ಮಹಿಳೆಯು ಎಲೆಕ್ಟ್ರಾನಿಕ್ ಸಿಟಿಯಿಂದ ವೈಟ್‌ಫೀಲ್ಡ್‌ಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ತಮಗಾದ ಕಹಿ ಅನುಭವವನ್ನು ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.
ವಿಡಿಯೊ ನೋಡಿ:
ಎಲೆಕ್ಟ್ರಾನಿಕ್ ಸಿಟಿಯಿಂದ ಸುಮಾರು 30 ಕಿ.ಮೀ. ದೂರದ ವೈಟ್‌ಫೀಲ್ಡ್‌ಗೆ ಪ್ರಯಾಣಿಸುತ್ತಿದ್ದ ನೀ ಯಾದವ್ ಅವರಿಗೆ ಮೂರು ಗಂಟೆ ಬೇಕಾಯ್ತು. ʼʼಆಟೋ ಹತ್ತಿ ಮೂರು ಗಂಟೆಗಳಾಗುತ್ತಾ ಬಂದರೂ 30 ನಿಮಿಷದ ದಾರಿ ತಲುಪಲಾಗಿಲ್ಲ. ಬೆಂಗಳೂರಿನ ಮುಖ್ಯ ರಸ್ತೆ ಗುಂಡಿಗಳಿಂದ ತುಂಬಿದೆ. ಇಂತಹ ಭೀಕರ ಟ್ರಾಫಿಕ್ ಹಾಗೂ ಕೆಟ್ಟ ರಸ್ತೆಗಳ ನಡುವೆ ಬೆಂಗಳೂರಿನ ಜನ ಮನೆ ಬಿಟ್ಟು ಹೊರಗೆ ಬರಲು ಹೇಗೆ ಸಾಧ್ಯ?ʼʼ ಎಂದು ಪ್ರಶ್ನಿಸಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಕಿರುಕುಳ
ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ಶೀರ್ಷಿಕೆಯಲ್ಲಿ, "ನಾನು ಬೆಂಗಳೂರಿನಲ್ಲಿರುವ ನನ್ನ ಮನೆಯಿಂದ ಹೊರಬರುವುದನ್ನು ನಿಲ್ಲಿಸಿದೆ. ಇದಕ್ಕೆ ಈ ಟ್ರಾಫಿಕ್ ಹಾಗೂ ರಸ್ತೆಗಳೇ ಕಾರಣ. ಆದರೆ ಇಂದು ಅನಿವಾರ್ಈಯವಾಗಿ ಪ್ರಯಾಣಿಸಿದೆ. ಇದು ನನ್ನ ಕೆಟ್ಟ ದಿನ'' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು, "ಅತ್ಯಂತ ಕಳಪೆ ರಸ್ತೆಗಳು, ಕೆಟ್ಟ ಸಂಚಾರದ ಬಗ್ಗೆ ಸಮಸ್ಯೆಗಳನ್ನು ಎತ್ತುವ ಬದಲು ಅಧಿಕಾರಿಗಳು, ರಾಜಕೀಯ ನಾಯಕರು ಭಾಷೆ ಮತ್ತು ನಿಷೇಧಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ʼʼಕೆಲಸ ಮಾಡಲು ಮತ್ತು ಹಣ ಸಂಪಾದಿಸಲು ಬೇರೆ ದಾರಿಯಿಲ್ಲದೆ ಜನರು ಹೊರಗೆ ಬರುತ್ತಾರಷ್ಟೇʼʼ ಎಂದು ಕಾಮೆಂಟ್ ಮಾಡಿದ್ದಾರೆ.