ಸೂರತ್,ಡಿ. 13: ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಆಟವಾಡುತ್ತಿದ್ದ ಮಗುವನ್ನು ಕಾಲಿನಿಂದ ಒದ್ದು ವ್ಯಕ್ತಿಯೊಬ್ಬ ವಿಕೃತಿ ಮೆರೆದಿರುವ ಘಟನೆ ತ್ಯಾಗ ರಾಜ ನಗರದಲ್ಲಿ ನಡೆದಿತ್ತು. ಇದೀಗ ಕ್ಷುಲ್ಲಕ ಕಾರಣಕ್ಕಾಗಿ ಬಾಲಕನ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ. ಮಗುವು ಆಟವಾಡುತ್ತಾ ನೆರೆಮನೆಯ ಕಾಲಿಂಗ್ ಬೆಲ್ ಒತ್ತಿದ ಕಾರಣ, 7 ವರ್ಷದ ಪುಟ್ಟ ಬಾಲಕನನ್ನು ಮಹಿಳೆಯೊಬ್ಬಳು ನೆಲದ ಮೇಲೆ ಎಳೆದಾಡಿ ಕ್ರೂರವಾಗಿ ಹಲ್ಲೆ ನಡೆಸಿದ್ದಾಳೆ. ಮಗುವಿಗೆ ತೀವ್ರ ಗಾಯಗಳಾಗಿದ್ದು, ಆರೋಪಿ ಮಹಿಳೆಯನ್ನು ಬಂಧಿಸ ಲಾಗಿದೆ. ಈ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸದ್ಯ ಈ ಸುದ್ದಿ ವೈರಲ್ (Viral Video) ಆಗಿದೆ.
ಸೂರತ್‌ನಲ್ಲಿ ಮಹಿಳೆಯು ಮಗುವಿನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದಿವೆ. ಸೂರತ್‌ನ 'ಸಿಲಿಕಾನ್ ರೆಸಿಡೆನ್ಸಿ' ಪ್ರದೇಶದಲ್ಲಿ ದೇವಾಂಶ್ ಎಂಬ ಏಳು ವರ್ಷದ ಬಾಲಕ ತನ್ನ ಸ್ನೇಹಿತರೊಂದಿಗೆ ಆಟ ವಾಡುತ್ತಿದ್ದನು. ಆದರೆ ಈ ವೇಳೆ ತಮಾಷೆಗಾಗಿ ಪಕ್ಕದ ಮನೆಯ ಬಾಗಿಲಿನ ಕಾಲಿಂಗ್ ಬೆಲ್ ಒತ್ತಿ ಓಡಿಹೋಗಿದ್ದಾನೆ. ಇದರಿಂದ ಕೋಪಗೊಂಡ ಅಪೇಕ್ಷಾ ರಿತ್ವಿಕ್ ವೈಷ್ಣವ್ ಎಂಬ ಮಹಿಳೆ, ಬಾಲಕನನ್ನು ಬೆನ್ನಟ್ಟಿ ಹಿಡಿದು ಅಮಾನವೀಯವಾಗಿ ನಡೆಸಿಕೊಂಡಿದ್ದಾಳೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಿಳೆ ಮಗುವನ್ನು ನೆಲದ ಮೇಲೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ವೀಡಿಯೊದಲ್ಲಿ, ಹುಡುಗ ಕಂಬಕ್ಕೆ ಅಂಟಿಕೊಂಡು ಅಳುತ್ತಾ ವಿರೋಧಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ, ಆದರೆ ಮಹಿಳೆ ಅವನನ್ನು ಗದರಿಸಿ ಬಲವಂತವಾಗಿ ಎಳೆದುಕೊಂಡು ಹೋಗುವುದನ್ನು ಮುಂದುವರಿಸಿದ್ದಾಳೆ. ಆಕೆ ಸತತವಾಗಿ ದೈಹಿಕವಾಗಿ ಹಿಂಸಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Viral Video: ಶಾಲೆಯಲ್ಲಿ ಚಿಕ್ಕ ಮಕ್ಕಳಿಂದ ಇಟ್ಟಿಗೆ ಹೊರಿಸಿದ ಶಿಕ್ಷಕಿ: ನೆಟ್ಟಿಗರಿಂದ ಆಕ್ರೋಶ
ದಾಳಿಯಲ್ಲಿ ದೇವಾಂಶ್‌ಗೆ ಹಲವಾರು ಗಾಯಗಳಾಗಿವೆ. ನೆಲದ ಮೇಲೆ ಎಳೆದ ನಂತರ ಅವನ ಕಾಲುಗಳು ತೀವ್ರವಾಗಿ ಗಾಯಗೊಂಡಿದ್ದು ಬಾಲಕನ ಮುಖ, ಹೊಟ್ಟೆ ಹಾಗೂ ಕಾಲುಗಳಿಗೆ ಬಲವಾದ ಪೆಟ್ಟಾಗಿದೆ. ಈ ಬಗ್ಗೆ ಪೋಷಕರು ತಮ್ಮ ಮಗನಿಗೆ ನ್ಯಾಯ ಬೇಕು ಎಂದು ಹೇಳುತ್ತಾ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಂತರ ಪೊಲೀಸರು ಅಪೇಕ್ಷಾ ರಿತ್ವಿಕ್ ವೈಷ್ಣವ್ ಎಂದು ಗುರುತಿಸಲಾದ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಆಕೆ ಮಗುವನ್ನು ಹೊಡೆದಿದ್ದಾಗಿ ಒಪ್ಪಿಕೊಂಡುಮತ್ತು ಕ್ಷಮೆಯಾಚಿಸಿದ್ದಾಳೆ.ದೂರು ಮತ್ತು ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶರಥನ ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇಂತಹ ಕ್ರೂರ ಮಹಿಳೆಯರು ಕೂಡ ನಮ್ಮ ಸಮಾಜದಲ್ಲಿ ಇದ್ದರಾ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಈ ಮಹಿಳೆಗೆ ಸರಿಯಾದ ಶಿಕ್ಷೆಯೆ ನೀಡಬೇಕೆಂದು ಕಾಮೆಂಟ್ ಮಾಡಿದ್ದಾರೆ.