ನವದೆಹಲಿ,ಜು.2: ಇತ್ತೀಚೆಗೆ ಜನರು ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕದ ವರ್ತನೆ ತೋರುವ ಅನೇಕ ಘಟನೆಗಳು ವರದಿಯಾಗಿವೆ. ಇದೀಗ ಪೂರ್ವ ರೈಲ್ವೆ ವ್ಯಾಪ್ತಿಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಚಲಿಸುತ್ತಿದ್ದ ಲೋಕಲ್ ರೈಲಿನ ಬಾಗಿಲಲ್ಲಿ ನಿಂತಿದ್ದ ಮಹಿಳೆಯೊಬ್ಬಳು, ಎದುರಿನಿಂದ ಬರುತ್ತಿದ್ದ ಮತ್ತೊಂದು ರೈಲಿನ ಮುಂಭಾಗಕ್ಕೆ ದೊಡ್ಡ ಕಲ್ಲನ್ನು ಎಸೆದಿರುವ ದೃಶ್ಯವೊಂದು (Viral News) ಕಂಡು ಬಂದಿದೆ. ಈ ಘಟನೆಯು ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮತ್ತೆ ಕಳವಳವನ್ನು ಹುಟ್ಟುಹಾಕಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮಹಿಳೆ ಯಾಕೆ ಈ ರೀತಿಯಾಗಿ ವರ್ತಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ವೈರಲ್ ಆದ ವೀಡಿಯೊದಲ್ಲಿ, ಚಲಿಸುತ್ತಿರುವ ಸ್ಥಳೀಯ ರೈಲಿನ ಬಾಗಿಲ ಬಳಿ ಮಹಿಳೆ ಕೈಯಲ್ಲಿ ದೊಡ್ಡ ಕಲ್ಲನ್ನು ಹಿಡಿದುಕೊಂಡು ನಿಂತಿರುವುದನ್ನು ತೋರಿಸಲಾಗಿದೆ.. ಎದುರು ಇನ್ನೊಂದು ಹಳಿಯಲ್ಲಿ ಮತ್ತೊಂದು ರೈಲು ಬರುತ್ತಿದ್ದಂತೆ ಆಕೆ ದೊಡ್ಡದಾದ ಕಲ್ಲನ್ನು ಎಸೆದಿದ್ದಾಳೆ. ಕಲ್ಲು ಪೈಲಟ್‌ನ ಕ್ಯಾಬಿನ್‌ನ ಮುಂಭಾಗದ ವಿಂಡ್‌ಶೀಲ್ಡ್‌ಗೆ ಬಿದ್ದಿದೆ. ಇದರಿಂದ ಗ್ಲಾಸ್ ಒಡೆದು ಪುಡಿ- ಪುಡಿಯಾಗಿದೆ. ಆಕೆ ಕಲ್ಲು ಎಸೆಯುತ್ತಿದ್ದಂತೆ ಏನೋ ಕೂಗುತ್ತಿರುವುದನ್ನು ಸಹ ಸೆರೆ ಹಿಡಿಯ ಲಾಗಿದೆ, ಅದು ವೀಡಿಯೊದಲ್ಲಿ ಕೇಳಿಸಲಿಲ್ಲ. ಮಹಿಳೆಯ ಗುರುತು, ಘಟನೆಯ ದಿನಾಂಕ ಮತ್ತು ಅವಳನ್ನು ಬಂಧಿಸಲಾಗಿದೆಯೇ ಎಂಬುದರ ಕುರಿತು ವಿವರಗಳನ್ನು ದೃಢಪಡಿಸಲಾಗಿಲ್ಲ.
ವಿಡಿಯೋ ನೋಡಿ:
ಈ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಳಕೆದಾರರು ಈ ಅಜಾಗರೂಕ ಕೃತ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದರೆ ಅಥವಾ ರೈಲಿನ ನಿಯಂತ್ರಣ ಕಳೆದುಕೊಂಡಿದ್ದರೆ ಉಂಟಾಗುವ ಪರಿಣಾಮಗಳ ಬಗ್ಗೆ ಆಘಾತ ವ್ಯಕ್ತಪಡಿಸಿದರು.
ಬಳಕೆದಾರರೊಬ್ಬರು "ಈ ರೀತಿಯ ಮನಸ್ಥಿತಿಗೆ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ. ಕಾನೂನು ಗಳನ್ನು ಉಲ್ಲಂಘಿಸಿದಾಗ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಅಂತಹ ಬೇಜವಾಬ್ದಾರಿ ವರ್ತನೆಯನ್ನು ಉತ್ತೇಜಿಸುವ ಜನರಿಗೆ ಎಂದಿಗೂ ಸಾರ್ವಜನಿಕ ಸೇವೆಯನ್ನು ವಹಿಸಬಾರದು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಜನರಿಗೆ ಎಂತಹ ಅನಾರೋಗ್ಯಕರ ಮನಸ್ಥಿತಿ ಇದೆ? ಇದು ಅವರ ಆಸ್ತಿಯೇ ಎಂದು ಕಿಡಿಕಾರಿದ್ದಾರೆ...