ನವದೆಹಲಿ, ಜು. 22: ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿವಾದ ದೇಶದ್ಯಾಂತ ಸಂಚಲನ ಮೂಡಿಸಿದೆ. ದೆಹಲಿಯಲ್ಲಿ ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಹೋರಾಟ ನಡೆಯುತ್ತಿದ್ದು ವಿವಿಧೆಡೆ ಪ್ರತಿಭಟನೆ ಕಾವು ಜೋರಾಗಿದೆ. ಅಷ್ಟೇ ಅಲ್ಲದೆ ಸೆಲೆಬ್ರಿಟಿ, ಯುವ ಜನತೆಯ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ಯುವಕನೊಬ್ಬ ಆಸ್ಟ್ರೇಲಿಯಾದಿಂದ ಸುಮಾರು 1 ಲಕ್ಷ ರುಪಾಯಿ ಖರ್ಚು ಮಾಡಿಕೊಂಡು ಬಂದಿರುವ ವಿಡಿಯೊವೊಂದು ವೈರಲ್ (Viral News) ಆಗುತ್ತಿದೆ.
ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಕ್ಷ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಹೀಗಿದ್ದರೂ ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಲು ದೇಶಾದ್ಯಂತದ ಜನರು ದೆಹಲಿಗೆ ತೆರಳುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾದಲ್ಲಿದ್ದ ಯುವಕನೊಬ್ಬ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಬರೋಬ್ಬರಿ 1 ಲಕ್ಷ ರುಪಾಯಿ ಖರ್ಚು ಮಾಡಿ ಭಾರತಕ್ಕೆ ಬಂದಿದ್ದಾನೆ.
ವಿಡಿಯೊ ನೋಡಿ:
ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಸಾರ್ಥಕ್ ಗೋಸ್ವಾಮಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಶೇರ್ ಮಾಡಿದ್ದಾರೆ. ಈ ಯುವಕನನ್ನು ಮೊಹಮ್ಮದ್ ದಾನಿಶ್ ಎಂದು ಪರಿಚಯಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾದಿಂದ ದೆಹಲಿಗೆ ಆಗಮಿಸಿದ್ದಾಇ ಎಂದು ಹೇಳಿದ್ದಾನೆ.
ಚಾರ್ಜ್ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್ ಕಾರ್ ತಳ್ಳಿದ ಸೈನಿಕ
ತನ್ನ ಆಸ್ಟ್ರೇಲಿಯನ್ ಐಡೆಂಟಿಟಿ ಕಾರ್ಡ್ ತೋರಿಸಿದ ದಾನಿಶ್, ʼʼಕೇವಲ ಈ ಪ್ರತಿಭಟನೆಯಲ್ಲಿ ಭಾಗವಹಿಸಲೆಂದೇ ಬಂದಿದ್ದು, ನಾನು ಬಿ.ಟೆಕ್ ಪದವಿ ಪೂರ್ಣಗೊಳಿಸಿದ್ದೇನೆ. ಆದರೆ ವೈದ್ಯಕೀಯ ಪ್ರವೇಶ ಪರೀಕ್ಷೆಗೂ ನನಗೂ ಯಾವುದೇ ವೈಯಕ್ತಿಕ ಸಂಬಂಧವಿಲ್ಲ. ದೇಶದಲ್ಲಿ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಸರ್ಕಾರ ಮಾತುಕತೆ ನಡೆಸಿಲ್ಲ. ಹೀಗಾಗಿ ನಾನು ಬೆಂಬಲ ವ್ಯಕ್ತಪಡಿಸುತ್ತಿದ್ದೇನೆʼʼ ಎಂದು ಹೇಳಿದ್ದಾನೆ.
ಈ ವಿಡಿಯೊ ಭಾರಿ ವೈರಲ್ ಆಗಿದ್ದು ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದಿದೆ. ನೆಟ್ಟಿಗರು, ʼʼನಿಜಕ್ಕೂ ಈ ಯುವಕನ ಬೆಂಬಲ ಮೆಚ್ಚುವಂತದ್ದುʼʼ ಎಂದು ಬರೆದಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧದ ಪ್ರತಿಭಟ ಭಾರತದಾದ್ಯಂತ ತೀವ್ರಗೊಳ್ಳುತ್ತಿದ್ದು, ಹಲವು ರಾಜ್ಯಗಳಿಗೂ ವ್ಯಾಪಿಸಿದೆ. ಕರ್ನಾಟಕ ಸೇರಿ ಬಿಹಾರ, ತಮಿಳುನಾಡು ಮತ್ತು ಅಸ್ಸಾಂನಲ್ಲಿ ಪ್ರತಿಭಟನೆ ನಡೆಯುತ್ತಿದೆ.