ಲಖನೌ, ಮಾ. 31: ಇತ್ತೀಚೆಗೆ ಸಣ್ಣ ಪುಟ್ಟ ಕಾರಣಕ್ಕಾಗಿ ದಂಪತಿ ವಿಚ್ಚೇದನಕ್ಕೆ ಮುಂದಾಗುತ್ತಾರೆ. ಅದರಲ್ಲೂ ಮದುವೆಯಾಗಿ ಕೆಲವೇ ಸಮಯದಲ್ಲಿ ಡಿವೋರ್ಸ್ ಪಡೆದು ಪ್ರತ್ಯೇಕಗೊಂಡ ಅನೇಕ ದಂಪತಿ ಇದ್ದಾರೆ. ಇದೀಗ ವ್ಯಕ್ತಿಯೊಬ್ಬ ತನಗೆ ಡಿವೋರ್ಸ್ ಸಿಕ್ಕ ಕಾರಣಕ್ಕೆ ದೇವಸ್ಥಾನಕ್ಕೆ ದಂಡವತ್ ನಮಸ್ಕಾರ ಹಾಕುತ್ತಾ ನಡೆಯುತ್ತಿರುವ ದೃಶ್ಯವೊಂದು ವೈರಲ್ ಆಗಿದೆ (Viral News). ದಾಂಪತ್ಯ ಜೀವನದ ಆರಂಭಿಕ ಹಂತದಲ್ಲೇ ಅವರ ನಡುವೆ ಜಗಳ ಉಂಟಾಗಿದ್ದು ಮುಕ್ತಿ ಸಿಕ್ಕರೆ ಉತ್ತರ ಪ್ರದೇಶದ ಭಾನ್‌ಪುರದ ಪ್ರಸಿದ್ಧ ಬಡ್ವಾ ಮಾತಾ ದೇವಸ್ಥಾನಕ್ಕೆ ತನ್ನ ಗ್ರಾಮದಿಂದ ದಂಡವತ್ ನಮಸ್ಕಾರ ಹಾಕುತ್ತಾ ಬರುವುದಾಗಿ ಅವರು ಹರಕೆ ಹೊತ್ತಿದ್ದ.
25 ವರ್ಷದ ಯೋಗೀಶ್ ಎನ್ನುವ ವ್ಯಕ್ತಿಯೇ 9 ಕಿ.ಮೀ. 'ದಂಡವತ್' (ಪೂರ್ಣ ದೇಹದ ಸಾಷ್ಟಾಂಗ ನಮಸ್ಕಾರ) ಪ್ರಯಾಣವನ್ನು ಕೈಗೊಂಡು ಗಮನ ಸೆಳೆದಾತ. ಸದ್ಯ ಈ ವಿಚಾರವು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಕಾನೂನುಬದ್ಧವಾಗಿ ವಿಚ್ಛೇದನ ಹಂತ ಪೂರ್ಣಗೊಂಡ ಬೆನ್ನಲ್ಲೇ ಯೋಗೀಶ್ ಈ ಹರಕೆಯನ್ನು ನೆರವೇರಿಸಿದ್ದಾನೆ.
ವೈರಲ್ ವಿಡಿಯೊ ಇಲ್ಲಿದೆ:
ಕೇವಲ ಎರಡು ವರ್ಷಗಳ ಹಿಂದೆ ವಿವಾಹವಾದ ಯೋಗೇಶ್‌ನ ವೈವಾಹಿಕ ಜೀವನವು ಜಗಳದಿಂದಲೇ ಕೂಡಿತ್ತು. ಆಗಾಗ್ಗೆ ಘರ್ಷಣೆ ನಡೆಯು ಆತನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಉದ್ವಿಗ್ನತೆ ಹೆಚ್ಚಾದಂತೆ, ಮದುವೆಯು ಮುರಿದು ಬೀಳುವ ಹಂತ ತಲುಪಿತು. ಈ ಸಂದರ್ಭದಲ್ಲಿ ಭಾನ್ಪುರದ ಪೂಜ್ಯ ಬಡ್ವಾ ಮಾತಾ ದೇವಸ್ಥಾನಕ್ಕೆ ಯೋಗೇಶ್ ಒಂದು ಹರಕೆ ಕಟ್ಟಿಕೊಂಡಿದ್ದ. ಮದುವೆಯಿಂದ ಮುಕ್ತನಾದರೆ, ತನ್ನ ಹಳ್ಳಿಯಿಂದ ದಂಡವತ್ ಪ್ರಯಾಣವನ್ನು ಮಾಡಿ ದೇವಸ್ಥಾನಕ್ಕೆ ಆಗಮಿಸುವುದಾಗಿ ಸಂಕಲ್ಪ ಕೈಗೊಂಡಿದ್ದ.
ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್ ಕೊಟ್ಟ ಹಿಂದೂ ವ್ಯಕ್ತಿ!
ಇದಕ್ಕಾಗಿ ಆತ ಮುಂಜಾನೆ ಉಪವಾಸವಿದ್ದು 9 ಕಿಲೋ ಮೀಟರ್ ಕಠಿಣ ಪ್ರಯಾಣವನ್ನು ಪ್ರಾರಂಭಿಸಿದ. ನೆಲದ ಮೇಲೆ ಮಲಗಿ ನಮಸ್ಕಾರ ಮಾಡುತ್ತ ಸಾಗಿದ್ದಾನೆ. ಆತನ ಪೋಷಕರು ಮತ್ತು ಗ್ರಾಮಸ್ಥರು ಭಕ್ತಿ ಘೋಷಣೆ ಹೊರಡಿಸುತ್ತ ಆತನಿಗೆ ಸಾಥ್ ನೀಡಿದರು. ದಾರಿಯುದ್ದಕ್ಕೂ ಬೆಂಬಲ ನೀಡಿದರು. ಸಂಜೆ 6 ಗಂಟೆಯ ಸುಮಾರಿಗೆ ಯೋಗೇಶ್ ದೇವಸ್ಥಾನವನ್ನು ತಲುಪುವ ಹೊತ್ತಿಗೆ, ಮೊಣಕಾಲುಗಳಲ್ಲಿ ರಕ್ತಸ್ರಾವ ಕಾಣಿಸಿಕೊಂಡಿತ್ತು. ಜತೆಗೆ ಆಯಾಸಗೊಂಡಿದ್ದ.
ದೇವಸ್ಥಾನಲ್ಲಿ ಪ್ರಾರ್ಥನೆ ಸಲ್ಲಿಸಿದ ಯೋಗೇಶ್ ಬಂಧನದಿಂದ ಮುಕ್ತಿ ನೀಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಇಂದು ದಾಂಪತ್ಯ ಜೀವನ ಈ ಮಟ್ಟಕ್ಕೆ ತಲುಪಿ ಬಿಟ್ಟಿದೆ ಎಂದು ಬರೆದಿದ್ದಾರೆ. ಬಹುತೇಕರು ಯೋಗೇಶ್ ನಡೆಗೆ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.