ನವದೆಹಲಿ, ಜು. 22: ವಿದೇಶದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಹೆಚ್ಚಿನ ವಿದ್ಯಾವಂತರ ಕನಸು. ಈ ಕನಸನ್ನು ನನಸು ಮಾಡಿಕೊಳ್ಳಲು ಭಾರತೀಯ ವಿದ್ಯಾರ್ಥಿಗಳು ಬ್ರಿಟನ್, ರಷ್ಯಾ, ಅಮೆರಿಕದಂತಹ ದೇಶಗಳಿಗೆ ಶಿಕ್ಷಣ ಪಡೆಯಲು ಹೋಗುತ್ತಾರೆ. ಆದರೆ ಇಲ್ಲಿನ ವಾಸ್ತವವು ಸುಲಭವಲ್ಲ. ದುಬಾರಿ ಜೀವನ ವೆಚ್ಚದ ಜತೆಗೆ ಬದುಕು ಸಾಗಿಸಲು ಬಹಳಷ್ಟು ಪರದಾಡಬೇಕಾಗುತ್ತದೆ. ಇದೀಗ ಯುರೋಪಿನಲ್ಲಿ ವಾಸಿಸುವ ಭಾರತೀಯ ಯುವಕನೊಬ್ಬ ಜನರು ನಿರೀಕ್ಷಿಸುವುದಕ್ಕಿಂತ ಹೆಚ್ಚು ಇಲ್ಲಿ ಜೀವನ ಕಠಿಣವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ರಾಹುಲ್ ಮಹಾಜನ್ ಎಂಬ ಯುವಕ ಈ ಪೋಸ್ಟ್ ಶೇರ್ ಮಾಡಿದ್ದಾರೆ. ಭಾರತದ ಜೀವನವನ್ನು ತೊರೆದ ನಂತರ ಅನೇಕ ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಹೋರಾಟಗಳ ಬಗ್ಗೆ ಮಾತನಾಡಿದ್ದಾರೆ. ವಿದೇಶದಲ್ಲಿ ಓದಬೇಕು, ಉತ್ತಮ ಜಾಬ್ ಗಿಟ್ಟಿಸಿಕೊಳ್ಳುವ ಕನಸಿದ್ದರೂ ಇಲ್ಲಿ ಜೀವನ ನಡೆಸಲು ಬಹಳಷ್ಟು ಹೋರಾಟ ಮಾಡಬೇಕಾಗುತ್ತದೆ ಎಂದಿದ್ದಾರೆ.
ವಿಡಿಯೊ ನೋಡಿ:
ವಿದೇಶಗಳಲ್ಲಂತೂ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಅನೇಕ ವಿದ್ಯಾರ್ಥಿಗಳು ತಮ್ಮನ್ನು ತಾವು ಪೋಷಿಸಿಕೊಳ್ಳಲು ಯಾವುದೇ ಸಣ್ಣ ಪುಟ್ಟ ಕೆಲಸ ಆಯ್ದು ಕೊಳ್ಳಬೇಕಾಗುವುದು ಅನಿವಾರ್ಯವಾಗಿರುತ್ತದೆ. ಯೂರೋಪ್ ಹಾಗೂ ಇತರ ವಿದೇಶಗಳಿಗೆ ಲಕ್ಷಾಂತರ ರುಪಾಯಿ ಸಾಲ ಮಾಡಿ ಬರುವ ವಿದ್ಯಾರ್ಥಿಗಳು, ಇಲ್ಲಿಗೆ ಬಂದ ನಂತರ ಬದುಕಲು ಯಾವುದೇ ಕೆಲಸಕ್ಕಾದರೂ ಸಿದ್ಧರಾಗಬೇಕಾಗುತ್ತದೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ವ್ಯಕ್ತಿಗಳಿಗೆ ಪ್ರತಿ ದಿನ ಸೀಮಿತ ಗಂಟೆಗಳ ಕಾಲ ಮಾತ್ರ ಕೆಲಸ ಮಾಡಲು ಅವಕಾಶವಿರುವುದರಿಂದ, ವೆಚ್ಚಗಳನ್ನು ಸರಿದೂಗಿಸಲು ಸಾಕಷ್ಟು ಸಂಪಾದಿಸುವುದು ಕಷ್ಟವಾಗುತ್ತದೆ. ಬಂದ ಸಂಬಳದಿಂದ ರೂಮ್ ಬಾಡಿಗೆ, ಊಟದ ಖರ್ಚು ಹಾಗೂ ದೈನಂದಿನ ವೆಚ್ಚಗಳನ್ನು ನಿಭಾಯಿಸುವುದು ಅತ್ಯಂತ ಕಷ್ಟದ ಕೆಲಸ. ಭಾರತದಲ್ಲಿ ಎಂದಿಗೂ ಮಾಡದಂತಹ ಸಣ್ಣಪುಟ್ಟ ಕೆಲಸಗಳನ್ನು ವಿದ್ಯಾರ್ಥಿಗಳು ಇಲ್ಲಿ ದಿನವಿಡೀ ಮಾಡಬೇಕಾಗುತ್ತದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
1.9 ಕೋಟಿ ರುಪಾಯಿಯ ಮೈಕ್ರೋಸಾಫ್ಟ್ ಉದ್ಯೋಗ ತ್ಯಜಿಸಿ ಅವಲತ್ತುಕೊಂಡ ಯುವಕ
ಶಿಕ್ಷಣ ಸಾಲಗಳು ವಿದ್ಯಾರ್ಥಿಗಳ ಮೇಲೆ ಮತ್ತಷ್ಟು ಒತ್ತಡವನ್ನು ಹೆಚ್ಚಿಸಬಹುದು. ದೈನಂದಿನ ವೆಚ್ಚಗಳನ್ನು ಸರಿದೂಗಿಸಿ, ತಾಯ್ನಾಡಿನಲ್ಲಿರುವ ಸಾಲವನ್ನು ಮರುಪಾವತಿಸಬೇಕು ಎಂಬ ಆತಂಕ ಅವರನ್ನು ಕಾಡಬಹುದು. ವಿದೇಶಕ್ಕೆ ಹೋದ ತಕ್ಷಣ ನಾವು ಶ್ರೀಮಂತರು ಎನ್ನುವ ಪಟ್ಟ ಸಮಾಜ ನೀಡುತ್ತದೆ. ಇದರಿಂದ ಮಾನಸಿಕವಾಗಿ ತೀವ್ರ ಒತ್ತಡಕ್ಕೆ ಒಳಗಾಗಬಹುದು ಅಂದರು.
ಈ ವಿಡಿಯೊಗೆ ಹಲವರು ಬೆಂಬಲ ನೀಡಿದ್ದಾರೆ. ಇವರ ಅಭಿಪ್ರಾಯಗಳಿಗೆ ನೈಜ ಅನುಭವ ಎಂದು ಕರೆದಿದ್ದಾರೆ. ಒಬ್ಬರು "ಹೌದು, ಇದನ್ನು ಒಪ್ಪುತ್ತೇನೆ" ಬರೆದಿದ್ದಾರೆ. ಮತ್ತೊಬ್ಬರು, ʼʼವಿದೇಶದಲ್ಲಿ ಕೆಲಸ ಸಿಕ್ಕರೂ ಹೋರಾಟ ನಿರಂತರವಾಗಿರಬೇಕುʼʼ ಎಂದಿದ್ದಾರೆ.