ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕುಸಿದು ಬಿದ್ದ ಬ್ಯಾಂಕ್‌ನಿಂದ ನಗದು ಸಂಗ್ರಹಿಸಲು ಸಾರ್ವಜನಿಕರ ದಂಡು; ಕಾಗದ ಪತ್ರ, ಲಾಕರ್‌ ಕೀ ಗತಿ ಏನು?

Agra Bank Collapse: ಗುಡಿಸಲಿಗೆ ಬೆಂಕಿ ಬಿದ್ದಾಗ ಅದರಿಂದಲೇ ಬೀಡಿ ಹಚ್ಚಿಕೊಂಡರು ಎನ್ನುವ ಮಾತಿದೆ. ಅಂದರೆ ಒಬ್ಬರು ಕಷ್ಟದಲ್ಲಿದ್ದಾಗ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗುವವರ ಕುರಿತು ಹೇಳುವ ಮಾತು ಇದು. ಈ ವಿಚಾರ ಈಗ್ಯಾಕೆ ಎಂದರೆ ಉತ್ತರ ಪ್ರದೇಶದಲ್ಲಿ ಬ್ಯಾಂಕ್‌ ಕುಸಿದು ಬಿದ್ದುದ್ದು, ಜನರು ಹಣ ಸಂಗ್ರಹಿಸಲು ಮುಂದಾಗಿದ್ದಾರೆ.

ಆಗ್ರಾದಲ್ಲಿ ಕುಸಿದ ಬ್ಯಾಂಕ್‌ ಕಟ್ಟಡ

ಲಖನೌ, ಏ. 25: ಅಕ್ಕಿ, ಮದ್ಯದ ಬಾಟಲ್‌ ಮುಂತಾದ ವಸ್ತುಗಳನ್ನು ಸಾಗಿಸುವ ಲಾರಿ ಮಗುಚಿ ಬಿದ್ದಾಗ, ಅಪಘಾತ ನಡೆದಾಗ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸುವುದು ಬಿಟ್ಟು ಸಾಮಗ್ರಿ ದೋಚಿಕೊಂಡು ಹೋಗಿರುವ ಅನೇಕ ಉದಾಹರಣೆಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ರೀತಿಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ನಡೆದಿದೆ (Agra Bank Collapse). ಬ್ಯಾಂಕ್‌ ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡ ಕುಸಿದು ಬಿದ್ದಾಗ ಅದರಲ್ಲಿನ ಲಕ್ಷಾಂತರ ಮೌಲ್ಯದ ಹಣವನ್ನು ಸಂಗ್ರಹಿಸಲು ಸ್ಥಳೀಯರು ಮುಂದಾಗಿದ್ದಾರೆ. ಸಾರ್ವಜನಿಕರ ಈ ಮನಸ್ಥಿತಿ ಸಾರ್ವತ್ರಿಕ ಟೀಕೆಗೆ ಕಾರಣವಾಗಿದ್ದು, ಬ್ಯಾಂಕ್‌ನಲ್ಲಿಟ್ಟಿರುವ ಒಡವೆ, ಪ್ರಮುಖ ಕಾಗದ ಪತ್ರ ಮತ್ತು ಬೀಗದ ಕೀ ಮಣ್ಣಾಗುವ ಭೀತಿ ಎದುರಾಗಿದೆ.

ಉತ್ತರ ಪ್ರದೇಶದ ಆಗ್ರಾ ಸಮೀಪದ ಬೆಲಂಗಂಜ್‌ನಲ್ಲಿ ಈ ಘಟನೆ ವರದಿಯಾಗಿದೆ. ʼʼಬ್ಯಾಂಕ್‌ ಕಟ್ಟಡ ಕುಸಿದು ಕೋಟ್ಯಂತರ ರುಪಾಯಿ ಅವಶೇಷದಡಿ ಹೂತು ಹೋಗಿದೆʼʼ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ನೂರಾರು ಮಂದಿ ಬ್ಯಾಗ್‌, ಕವರ್‌ ಹಿಡಿದು ಸ್ಥಳಕ್ಕೆ ಧಾವಿಸಿದರು. ಪರಿಸ್ಥಿತಿಯ ಲಾಭ ಪಡೆಯುವುದೆಂದರೆ ಇದು ಎನ್ನುವುದು ನೆಟ್ಟಿಗರ ಮಾತು.

ಏನಿದು ಘಟನೆ?

ಬೆಳಂಗಂಜ್‌ನಲ್ಲಿ ಕೆನರಾ ಬ್ಯಾಂಕ್‌ ಇರುವ ಹಳೆ ಕಟ್ಟಡ ಕುಸಿದು ಬಿತ್ತು. ಪಕ್ಕದಲ್ಲಿ ಮಾಲ್‌ ಒಂದರ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಸುತ್ತಮುತ್ತಲಿನ ಜನರೆಲ್ಲ ಬ್ಯಾಂಕ್‌ನತ್ತ ಧಾವಿಸಿದರು. ಅವಶೇಷಗಳ ಅಡಿಯಲ್ಲಿ ನಗದು ಇರಬಹುದು ಎನ್ನುವ ನಿರೀಕ್ಷೆಯಲ್ಲಿ ಜನರು ಹುಡುಕಾಟ ನಡೆಸತೊಡಗಿದರು. ಕೂಡಲೇ ಬ್ಯಾಂಕ್‌ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಬ್ಯಾಂಕ್‌ ಆವರಣದಲ್ಲಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಯಿತು.

"ಮನೆಗಳಿಗೆ ಬಾಗಿಲೇ ಇಲ್ಲ, ಕಳ್ಳರು - ದರೋಡೆಕೋರ ಭಯ ಇಲ್ಲ": ಏನಿದು ಈ ಗ್ರಾಮದ ಪದ್ದತಿ?

ಹೀಗೆ ಸಾರ್ವಜನಿಕರ ಹಾವಳಿಯನ್ನು ನಿಯಂತ್ರಣಕ್ಕೆ ತಂದ ಬಳಿಕ ಅವಶೇಷಗಳಿಂದ ಎಲ್ಲ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು. ಸುಮಾರು 300 ಕೋಟಿ ರುಪಾಯಿಗಳ ವಹಿವಾಟು ನಿರ್ವಹಿಸುವ ಶಾಖೆಯು ಕೌಂಟರ್‌ಗಳಲ್ಲಿ ಮತ್ತು ಸ್ಟ್ರಾಂಗ್ ರೂಮ್‌ನೊಳಗೆ ಮೀಸಲು ಹಣ ಇತ್ತು. ಸುಮಾರು 25 ಲಕ್ಷ ರುಪಾಯಿ ಪೊಲೀಸ್ ರಕ್ಷಣೆಯಲ್ಲಿ ಮತ್ತೊಂದು ಶಾಖೆಗೆ ಸುರಕ್ಷಿತವಾಗಿ ವರ್ಗಾಯಿಸಲಾಯಿತು.

ಪ್ರಮುಖ ದಾಖಲೆ ಪತ್ರ-ಕೀ ಮಣ್ಣುಪಾಲು

ನಗದೇನೋ ವಶಪಡಿಸಿಕೊಳ್ಳಲಾಗಿದೆ. ಆದರೆ ಮುಖ್ಯ ಆತಂಕ ಇರುವುದು ಪ್ರಮುಖ ದಾಖಲೆ ಪತ್ರ ಮತ್ತು ಕೀ ವಿಚಾರದಲ್ಲಿ. ಕುಸಿದ ಕಟ್ಟಡದೊಳಗೆ ಕೋಟ್ಯಂತರ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಹೊಂದಿರುವ ಲಾಕರ್‌, ಅಡವಿಟ್ಟ ಚಿನ್ನ ಮತ್ತು ನಿರ್ಣಾಯಕ ಹಣಕಾಸಿನ ದಾಖಲೆಗಳಿವೆ ಎಂದು ಮೂಲಗಳು ತಿಳಿಸಿವೆ. ಕಟ್ಟಡದ ಹಿಂಭಾಗದಲ್ಲಿರುವ ಲಾಕರ್ ಕೊಠಡಿಗಳನ್ನು ತಲುಪಲು, ರಕ್ಷಣಾ ತಂಡಗಳು ಮತ್ತು ಬ್ಯಾಂಕ್ ಸಿಬ್ಬಂದಿ ಛಾವಣಿ ಮೂಲಕ ಪ್ರವೇಶಿಸಲು ಯತ್ನಿಸುತ್ತಿದ್ದಾರೆ.

ಸದ್ಯ ಲಾಕರ್ ಕೀಗಳು ಇನ್ನೂ ನಾಪತ್ತೆಯಾಗಿದ್ದು, ಅವಶೇಷಗಳಲ್ಲಿ ಎಲ್ಲೋ ಹೂತುಹೋಗಿರುವ ಶಂಕೆ ವ್ಯಕ್ತವಾಗಿದೆ. ವ್ಯಾಪಕ ಹುಡುಕಾಟಗಳ ಹೊರತಾಗಿಯೂ, ಅವುಗಳನ್ನು ಇನ್ನೂ ಪತ್ತೆ ಹಚ್ಚಿಲ್ಲ. ಗ್ರಾಹಕರು ತಮ್ಮ ಬೆಲೆಬಾಳುವ ವಸ್ತುಗಳನ್ನು ಹೇಗೆ ಮರಳಿ ಪಡೆಯುತ್ತಾರೆ ಎಂಬ ಪ್ರಶ್ನೆ ಹುಟ್ಟುಹಾಕಿದೆ. ʼʼಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ. ಗ್ರಾಹಕರ ಬೆಲೆಬಾಳುವ ವಸ್ತುಗಳನ್ನು ಪತ್ತೆ ಹಚ್ಚಲಾಗುವುದುʼʼ ಎಂದು ಬ್ಯಾಂಕ್‌ನ ಹಿರಿಯ ಅದಿಕಾರಿಯೊಬ್ಬರು ತಿಳಿಸಿದ್ದಾರೆ.

ಲಡ್ಡು ತಯಾರಿಕೆಗೆ ತುಪ್ಪದ ಕೊರತೆಯಿಲ್ಲ; ಟ್ಯಾಂಕರ್‌ ಅಪಘಾತದ ಬೆನ್ನಲ್ಲೇ ತಿರುಪತಿ ದೇವಸ್ಥಾನ ಮಂಡಳಿಯಿಂದ ಸ್ಪಷ್ಟನೆ

ಶಾಖೆಯ ಇತಿಹಾಸ

ಕೆನರಾ ಬ್ಯಾಂಕ್‌ನ ಬೆಲಂಗಂಜ್ ಶಾಖೆಯು ದೀರ್ಘ ಇತಿಹಾಸವನ್ನು ಹೊಂದಿದೆ. ಭೈರೋನ್ ಬಜಾರ್ ಪ್ರದೇಶದಲ್ಲಿ ಇದು 1980ರಲ್ಲಿ ಸ್ಥಾಪನೆಯಾಯಿತು. ಅಂದಿನಿಂದ ಇದು ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ ಕಿರಿದಾದ ಪ್ರದೇಶದಲ್ಲಿ ಈ ಕಟ್ಟಡ ಇರುವುದರಿಂದ ಉತ್ಖನನ ಕಾಮಗಾರಿಗೆ ಅಡಚಣೆ ಎದುರಾಗಿದೆ. ಅದೃಷ್ಟವಶಾತ್‌ ಕಟ್ಟಡ ಕುಸಿತದಿಂದ ಯಾವುದೇ ರೀತಿಯ ಸಾವು-ನೋವಿನ ವರದಿಯಾಗಿಲ್ಲ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author