ನವದೆಹಲಿ, ಜು. 23: ಭಾರತದಲ್ಲಿ ಹಲವು ಪ್ರಸಿದ್ಧ ತಾಣಗಳಿವೆ. ಐತಿಹಾಸಿಕ ದೇವಾಲಯ, ಪ್ರಕೃತಿ ಸೌಂದರ್ಯದಿಂದ ಕೂಡಿದ ಸ್ಥಳಗಳು, ವೈವಿಧ್ಯಭೂದೃಶ್ಯಗಳಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಲೇ ಇರುತ್ತದೆ. ವಿದೇಶಿಗರಂತೂ ಇಲ್ಲಿನ ಪರಿಸರ ಆನಂದಿಸಲು ಭೇಟಿ ನೀಡುತ್ತಾರೆ. ಇದೀಗ ಅಮೆರಿಕದ ಖ್ಯಾತ ಟ್ರಾವೆಲರ್ ಒಬ್ಬರು ಜಾರ್ಖಂಡ್‌ನ ಪ್ರಸಿದ್ಧ ನಗರ ಜಮ್‌ಶೆಡ್‌ಪುರದ ಹಸಿರು ತಾಣ ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರು ಈ ನಗರಕ್ಕೆ ಭೇಟಿ ನೀಡಿದ ರೋಮಾಂಚಕ ವಿಡಿಯೊವನ್ನು ಶೇರ್ (Viral News) ಮಾಡಿದ್ದು, ಈ ಸ್ಥಳ ಎಂದಿಗೂ ತಮ್ಮ ಭಾರತದ ಪಟ್ಟಿಯಲ್ಲಿ ಇರಲಿಲ್ಲ. ಆದರೆ ಅಂತಿಮವಾಗಿ ಭಾರತದಲ್ಲಿ ಇದು ನೆಚ್ಚಿನ ಸ್ಥಳಗಳಲ್ಲಿ ಒಂದಾಯಿತು ಎಂದು ಹೇಳಿಕೊಂಡಿದ್ದಾರೆ.
ಟೋನಿ ಕ್ಲೋರ್ ಎಂಬ ವ್ಲಾಗರ್ ಜಮ್‌ಶೆಡ್‌ಪುರದ ಕೆಲವು ಜನಪ್ರಿಯ ಸ್ಥಳವನ್ನು ಅನ್ವೇಷಿಸುತ್ತಿರುವುದನ್ನು ವಿಡಿಯೊ ಸೆರೆಹಿಡಿದಿದೆ. ಇಲ್ಲಿನ ನಗರದ ಸ್ವಚ್ಛತೆ, ಹಸಿರು ಭೂ ದೃಶ್ಯ ಹಾಗೂ ಮೂಲಸೌಕರ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ʼʼಜಮ್‌ಶೆಡ್‌ಪುರ ನನ್ನ ಇಂಡಿಯಾ ಲಿಸ್ಟ್‌ನಲ್ಲಿ ಇರಲೇ ಇಲ್ಲ. ಆದರೆ ಈಗ ಇದು ನನ್ನ ಮಕ್ಕಳಿಗೆ ಹೆಮ್ಮೆಯಿಂದ ಹೇಳಿಕೊಳ್ಳುವ ತಾಣʼʼ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ವಿಡಿಯೊ ನೋಡಿ:
ಟೋನಿ ಬೆಟ್ಟದ ತುದಿಯಲ್ಲಿರುವ ಗೋಲ್ಪಹರಿ ದೇವಸ್ಥಾನ, ಜುಬಿಲಿ ಪಾರ್ಕ್, ಸಕ್ಚಿ ಮಾರುಕಟ್ಟೆ, ದಿಮ್ನಾ ಸರೋವರ ಮತ್ತು ಸುವರ್ಣರೇಖಾ ಮತ್ತು ಖಾರ್ಕೈ ನದಿಗೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ. ಇಲ್ಲಿ ಆಕರ್ಷಕ ಉದ್ಯಾನವನಗಳು, ಸೌರಶಕ್ತಿ ಚಾಲಿತ ಮೂಲಸೌಕರ್ಯ ಮತ್ತು ಹಚ್ಚ ಹಸಿರಿನ ಪರಿಸರವನ್ನು ಅವರು ಶ್ಲಾಘಿಸಿದರು.
ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!
ʼʼಈ ಸ್ಥಳದ ಕುರಿತಾಗಿ ಯಾರು ಮಾತನಾಡದೇ ಇರುವ ಕಾರಣ ಇಲ್ಲಿನ ಸ್ಥಳದ ಬಗ್ಗೆ ನನಗೂ ತಿಳಿದಿರಲಿಲ್ಲ. ಅಕ್ಷರಶಃ ಯಾರೂ ಕೂಡ ನನಗೆ ಜಮ್‌ಶೆಡ್‌ಪುರಕ್ಕೆ ಬರಲು ಹೇಳಲಿಲ್ಲ. ಆದರೂ ಇಲ್ಲಿಗೆ ಬಂದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಈ ನಗರಕ್ಕೆ ಇತರ ನಗರಗಳಂತೆ ಸಾಂಪ್ರದಾಯಿಕ ಮುನ್ಸಿಪಾಲಿಟಿ ವ್ಯವಸ್ಥೆ ಇಲ್ಲ, ಇದನ್ನು ಟಾಟಾ ಸ್ಟೀಲ್‌ನ ನಾಗರಿಕ ವಿಭಾಗವೇ ನಿರ್ವಹಿಸುತ್ತದೆʼʼ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.
ʼʼಜಾರ್ಖಂಡ್‌ಗೆ ಹೋಗಬೇಡಿ, ಬಹಳಷ್ಟು ಕೊಳಕಾಗಿದೆ ಎನ್ನುವವರಿಗೆ ಇದೇ ಉತ್ತರ. ಇದು ನಿಜಕ್ಕೂ ಸುಂದರವಾಗಿದೆʼʼ ಎಂದು ಬರೆದಿದ್ದಾರೆ. ಈ ಬಗ್ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, ʼʼಇದು ಅತ್ಯಂತ ಸ್ವಚ್ಛ ಮತ್ತು ಅತ್ಯಂತ ಸುಂದರ ನಗರ. ನೋಡಲು ಸಂತೋಷವಾಗುತ್ತಿದೆʼʼ ಎಂದರು. ಮತ್ತೊಬ್ಬರು, ʼʼಹೆಮ್ಮೆಯ ಜಮ್‌ಶೆಡ್‌ಪುರ ನಿಜಕ್ಕೂ ಅದ್ಬುತವಾಗಿದೆʼʼ ಎಂದು ಹೇಳಿದರು.