ನವದೆಹಲಿ: ಸೈನಿಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಸೈನಿಕನ (soldier) ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆದ ಬಳಿಕ ನಾಲ್ಕು ಮಂದಿ ಟೋಲ್ ಬೂತ್ (toll booth) ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಕಪಿಲ್ ಕವದ್ ಎಂಬ ಸೈನಿಕ ಭಾರತೀಯ ಸೇನೆಯ ರಜಪೂತ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ರಜೆಯ ನಿಮಿತ್ತ ತಮ್ಮ ಮನೆಗೆ ಬಂದಿದ್ದರು. ಮತ್ತೆ ಕರ್ತವ್ಯಕ್ಕೆ ಹಿಂತಿರುಗಲು ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಪಿಲ್ ಮತ್ತು ಅವರ ಸೋದರಸಂಬಂಧಿ ಜನದಟ್ಟಣೆಯ ಭುನಿ ಟೋಲ್ ಬೂತ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇದರಿಂದ ವಿಮಾನಕ್ಕೆ ತಡವಾಗುತ್ತದೆ ಎಂದು ಆತಂಕಕೊಂಡ ಕಪಿಲ್ ಕಾರಿನಿಂದ ಇಳಿದು ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಮಾತನಾಡಲು ಪ್ರಾರಂಭಿಸಿದರು.
ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಐದು ಮಂದಿ ಟೋಲ್ ಬೂತ್ ಸಿಬ್ಬಂದಿಗಳು ಕಪಿಲ್ ಮತ್ತು ಅವರ ಸೋದರಸಂಬಂಧಿಯನ್ನು ಥಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹಲ್ಲೆಯ ವಿಡಿಯೊದಲ್ಲಿ, ಕಪಿಲ್ ಅವರಿಗೆ ಕೋಲಿನಿಂದ ಥಳಿಸಲಾಗಿದೆ. ನಂತರ ಕಪಿಲ್ ಅವರನ್ನು ಕಂಬಕ್ಕೆ ಬಿಗಿದು, ಅವರ ಕೈಗಳನ್ನು ಹಿಂದಕ್ಕೆ ಎಳೆದು ನಿಂದಿಸಿ, ಮನಬಂದಂತೆ ಥಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Rolls-Royce: ಪೇಟದ ಬಣ್ಣಕ್ಕೆ ತಕ್ಕಂತ ರೋಲ್ಸ್-ರಾಯ್ಸ್ ಕಾರುಗಳು; ಭಾರತೀಯ ಮೂಲದ ‘ಬ್ರಿಟಿಷ್ ಬಿಲ್ ಗೇಟ್ಸ್’ ಇವರು
ವಿಡಿಯೊ ವೀಕ್ಷಿಸಿ:
ಇನ್ನು ಪ್ರಕರಣ ಸಂಬಂಧ ಹಲ್ಲೆ ನಡೆಸಿದ ಟೋಲ್ ಬೂತ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. “ಕಪಿಲ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭುನಿ ಟೋಲ್ ಬೂತ್‌ನಲ್ಲಿ ಜನದಟ್ಟಣೆ ಹೆಚ್ಚಿದ್ದರಿಂದ ಉದ್ದನೆಯ ಸರತಿ ಸಾಲಿನಲ್ಲಿ ವಾಹನಗಳು ನಿಂತಿದ್ದವು. ಆದರೆ, ಕಪಿಲ್ ವಿಮಾನ ತಡವಾಗುತ್ತದೆ ಎಂಬ ಆತಂಕದಲ್ಲಿದ್ದರು. ಹೀಗಾಗಿ ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ. ಈ ವೇಳೆ ವಾಗ್ವಾದ ಶುರುವಾಗಿದೆ. ಟೋಲ್ ಬೂತ್ ಸಿಬ್ಬಂದಿ ಕಪಿಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಪಿಲ್ ಕುಟುಂಬದ ದೂರಿನ ಮೇರೆಗೆ ಸರೂರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
“ಸಿಸಿಟಿವಿ ದೃಶ್ಯಾವಳಿಗಳು ಮತ್ತು ವಿಡಿಯೊಗಳನ್ನು ಪರಿಶೀಲಿಸಿದ ನಂತರ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಲು ಇನ್ನೂ ಎರಡು ತಂಡಗಳು ಕಾರ್ಯನಿರ್ವಹಿಸುತ್ತಿವೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕೆಲವು ವರದಿಗಳ ಪ್ರಕಾರ, ಕಪಿಲ್ ತನ್ನ ಗ್ರಾಮವು ಟೋಲ್ ಶುಲ್ಕದಿಂದ ವಿನಾಯಿತಿ ಪಡೆದ ಪ್ರದೇಶದಲ್ಲಿದೆ ಎಂದು ಟೋಲ್ ಬೂತ್ ಸಿಬ್ಬಂದಿಗೆ ಹೇಳಿದಾಗ ವಾಗ್ವಾದ ಪ್ರಾರಂಭವಾಯಿತು. ಇದು ಸೈನಿಕನ ಹಲ್ಲೆಗೆ ಕಾರಣವಾಯಿತು.
ಇದನ್ನೂ ಓದಿ: Viral News: ನಿದ್ರೆ ಮಾಡಿಯೇ ಲಕ್ಷ ಲಕ್ಷ ಸಂಪಾದಿಸುವ ಮಹಿಳೆ; ಹೇಗೆ ಗೊತ್ತೆ?