ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಮತದಾನದ ಮೊದಲು ಹಂಚಿದ ಹಣ ವಾಪಸ್‌ ಕೊಡಿʼʼ: ಸೋತ ಬಳಿಕ ವರಸೆ ಬದಲಾಯಿಸಿದ ಅಭ್ಯರ್ಥಿಯ ವಿಡಿಯೊ ವೈರಲ್‌

Viral Video: ಮತದಾನದ ಮೊದಲು ತನಗೆ ವೋಟು ಹಾಕಲು ಹಣ ಹಂಚಿದ್ದ ಅಭ್ಯರ್ಥಿ ಸೋತ ಬಳಿಕ ಹಣ ವಾಪಸ್‌ ಮಾಡುವಂತೆ ಮತದಾರರ ಬಳಿ ಕೇಳಿದ ವಿಚಿತ್ರ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಸದ್ಯ ಆತ ವಿಡಿಯೊ ಸಂದೇಶ ಮೂಲಕ ಹಣ ಮರಳಿ ಕೇಳುವ ವಿಚಾರ ಸದ್ದು ಮಾಡುತ್ತಿದೆ.

ಕೆ. ರೆಡ್ಡಿ ಪ್ರಸಾದ್‌

ಅಮರಾವತಿ, ನ. 5: ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡುವುದು, ಬೆದರಿಕೆ ಹಾಕುವುದು ಕಾನೂನು ಬಾಹಿರ. ಆದರೆ ರಾಜಕಾರಣಿಗಳು ವೋಟಿಗಾಗಿ ಹಣ, ದುಬಾರಿ ವಸ್ತುಗಳನ್ನು ಹಂಚುವ ಪ್ರವೃತ್ತಿ ಮುಂದುವರಿಸಿದ್ದಾರೆ. ಎಷ್ಟೇ ಕಠಿಣ ನಿಯಮ ತಂದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದ ವಿವಾದವೊಂದು ಸದ್ದು ಮಾಡುತ್ತಿದೆ. ಮತದಾನದ ಮೊದಲು ತನಗೆ ವೋಟು ಹಾಕಲು ಹಣ ಹಂಚಿದ್ದ ಅಭ್ಯರ್ಥಿ ಸೋತ ಬಳಿಕ ಹಣ ವಾಪಸ್‌ ಮಾಡುವಂತೆ ಮತದಾರರ ಬಳಿ ಕೇಳಿದ್ದಾರೆ (Viral News). ಸದ್ಯ ಈ ವಿಚಾರ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ.

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಪುರಸಭೆಯ 32ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿಯ (YSR Congress Party) ಅಭ್ಯರ್ಥಿ ಕೆ. ರೆಡ್ಡಿ ಪ್ರಸಾದ್‌ ಇದೀಗ ಮತದಾರರ ಬಳಿ ಹಣ ಕೇಳುವ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಕೆ. ರೆಡ್ಡಿ ಪ್ರಸಾದ್‌ ಅವರ ವೈರಲ್‌ ವಿಡಿಯೊ:



ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರೆಡ್ಡಿ ಪ್ರಸಾದ್‌ ಜನ ಸೇನಾ ಪಾರ್ಟಿಯ ಚೈತನ್ಯ ಮೋಹನ್‌ ವಿರುದ್ಧ ಸೋತ ಬಳಿಕ ಹತಾಶನಾಗಿ ಇದೀಗ ತಾವು ಹಂಚಿದ ಹಣ ವಾಪಸ್‌ ಕೇಳಿದ್ದಾರೆ. ಸದ್ಯ ಅವರ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಚುನಾವಣೆಯಲ್ಲಿ ಜಯಗಳಿಸುವ ಉದ್ದೇಶದಿಂದ ಪ್ರತಿ ಮತದಾರರಿಗೆ 1,000 ರೂಪಾಯಿಯಂತೆ ಹಂಚಲು ಅಧಿಕ ಬಡ್ಡಿ ದರ ತೆತ್ತು 10 ಲಕ್ಷ ರೂಪಾಯಿ ಸಾಲ ಮಾಡಿದ್ದಾಗಿ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ದೇಗುಲದೊಳಗೆ ಅತ್ಯಾಚಾರ ನಡೆಯುತ್ತದೆ ಎಂದ ಹಿಂದೂ ವಿರೋಧಿ ನೇಹಾ ಬೋರಾಗೆ ಕಾಂಗ್ರೆಸ್‌ ಸ್ಫೂರ್ತಿ: ಬಿಜೆಪಿ ಟೀಕೆ

ಪ್ರತಿಭಟನೆ ಎಚ್ಚರಿಕೆ

ಸೋತ ಹತಾಶೆಯಲ್ಲಿ ಮತದಾರರ ವಿರುದ್ಧ ಕಿಡಿಕಾರಿದ ಅವರು 400 ಮಂದಿ ಹಣ ಪಡೆದು ತನಗೆ ಮತ ಹಾಕಿಲ್ಲ ಎಂದಿದ್ದಾರೆ. ʼʼ400 ಮತದಾರರು ನನ್ನಿಂದ ಹಣ ಪಡೆದು ನನಗೆ ವೋಟು ಮಾಡಿಲ್ಲ. ಅವರು ನನಗೆ ಹಣ ಹಿಂದಿರುಗಿಸಬೇಕು. ಇಲ್ಲದಿದ್ದರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇನೆʼʼ ಎಂದು ಎಚ್ಚರಿಸಿದ್ದಾರೆ.

ಕೆಲವು ಮತದಾರರು ಸ್ಥಳೀಯ ದೇವತೆಯಾದ ಮರೆಮ್ಮತಳ್ಳಿಯ ಹೆಸರಿನಲ್ಲಿ ಪ್ರಮಾಣ ಮಾಡಿ ಹಣವನ್ನು ಸ್ವೀಕರಿಸಿದ್ದರೂ ನಂತರ ಎದುರಾಳಿ ಅಭ್ಯರ್ಥಿಗೆ ಬೆಂಬಲ ನೀಡಿದರು ಎಂದು ಪ್ರಸಾದ್ ಆರೋಪಿಸಿದ್ದಾರೆ. ಆ ಮತದಾರರು ತಾವು ಪಡೆದ ಹಣವನ್ನು ಮರೆಮ್ಮತಳ್ಳಿ ದೇವಸ್ಥಾನದಲ್ಲಿ ಹಿಂತಿರುಗಿಸಬೇಕೆಂದು ಹೇಳಿದ್ದಾರೆ. ಇದೇ ವೇಳೆ ಅವರು ವಿಜೇತ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಚುನಾವಣೆ ಪ್ರಚಾರದ ವೇಳೆ ವಾರ್ಡ್‌ಗೆ ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರೂ ಎದುರಾಳಿಗಳ ಕುತಂತ್ರದಿಂದ ಸೋತಿದ್ದಾಗಿ ಹೇಳಿದ್ದಾರೆ.

ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕಚ್ಚಿಕೊಂಡು ರಸ್ತೆಯಲ್ಲಿ ಓಡಿದ ಬೀದಿ ನಾಯಿ! ಎದೆ ಝಲ್ಲೆನಿಸುವ ವಿಡಿಯೊ ವೈರಲ್‌

ಟಿಡಿಪಿ ಮೈತ್ರಿಕೂಟಕ್ಕೆ ಭರ್ಜರಿ ಜಯ

ನವೆಂಬರ್‌ 1ರಂದು ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಆಡಳಿತರೂಢ ತೆಲುಗು ದೇಶಂ ಪಾರ್ಟಿ (TDP) ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಗಳಿಸಿದೆ. ಪಲಮನೇರುವಿನ 36 ವಾರ್ಡ್‌ಗಳಲ್ಲಿ ಟಿಡಿಪಿ 26, ವೈಎಸ್‌ಆರ್‌ಸಿಪಿ 8 ಮತ್ತು ಜನ ಸೇನಾ ಪಾರ್ಟಿ 2 ಸ್ಥಾನಗಳನ್ನು ಗೆದ್ದುಕೊಂಡಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author