ಜೈಪುರ, ಸೆ. 23: ಹಣಕಾಸಿನ ವೈಷಮ್ಯದ ಕಾರಣ ಬೈಕ್ ಸವಾರನೊಬ್ಬನ ಮೇಲೆ ಟ್ರ್ಯಾಕ್ಟರ್ ಹರಿಸಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಶೈತಾನ್ ಗುರ್ಜರ್ ಎಂದು ಗುರುತಿಸಲಾದ ಆರೋಪಿ ಪೆಟ್ರೋಲ್ ಬಂಕ್‌ನಲ್ಲಿದ್ದ ಸುರೇಶ್ ಗುರ್ಜರ್ ಅವರನ್ನು ಗುರಿಯಾಗಿಸಿಕೊಂಡು ಟ್ರ್ಯಾಕ್ಟರ್ ಹರಿಸಲು ಯತ್ನಿಸಿದ್ದ. ಇಬ್ಬರೂ ರಾಜಸ್ಥಾನದ ಪಿಂಗುನ್ ಗ್ರಾಮದ ನಿವಾಸಿಗಳಾಗಿದ್ದು, ಹಣಕಾಸಿನ ವಹಿವಾಟಿನ ಬಗ್ಗೆ ಜಗಳವಾಗಿತ್ತು ಎಂದು ತಿಳಿದು ಬಂದಿದೆ. ಇದರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ (Viral News) ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ.
ರಾಜಸ್ಥಾನದ ನರೈನಾ ಪೊಲೀಸ್ ಠಾಣೆ ಬಳಿಯ ಪಿಂಗುಣ್ ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಸುರೇಶ್ ತನ್ನ ಬೈಕ್‌ನಲ್ಲಿ ಪೆಟ್ರೋಲ್ ಬಂಕ್‌ಗೆ ಬಂದು ಪೆಟ್ರೋಲ್ ಹಾಕಿಸುತ್ತಿದ್ದಾಗ, ಅಲ್ಲೇ ಇದ್ದ ಶೈತಾನ್ ಗುಜ್ಜರ್ ದಿಢೀರನೇ ತನ್ನ ಟ್ರ್ಯಾಕ್ಟರ್ ಅನ್ನು ಸುರೇಶ್ ಕಡೆಗೆ ತಿರುಗಿಸಿ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ.
ವಿಡಿಯೊ ನೋಡಿ:
ಸುರೇಶ್ ಕೂಡಲೇ ಸಮಯ ಪ್ರಜ್ಞೆ ಮೆರೆದು ಓಡಿ ಪೆಟ್ರೋಲ್ ಬಂಕ್‌ನ ಕಟ್ಟಡದೊಳಗೆ ಅಡಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಟ್ರ್ಯಾಕ್ಟರ್ ಹರಿದ ಪರಿಣಾಮ ಬೈಕ್ ಸಂಪೂರ್ಣ ಹಾನಿಗೊಳಗಾಗಿದೆ. ಬೈಕ್ ಚಾಲಕ ಸುರೇಶ್‌ನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ
ಸುರೇಶ್ ಅವರ ದೂರಿನ ಆಧಾರದ ಮೇಲೆ ನರೈನಾ ಪೊಲೀಸ್ ಠಾಣೆಯಲ್ಲಿ ಶೈತಾನ್ ಗುರ್ಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಹಣದ ವಹಿವಾಟಿನ ಬಗ್ಗೆ ಇಬ್ಬರು ವ್ಯಕ್ತಿಗಳ ನಡುವಿನ ಭಿನ್ನಾಭಿಪ್ರಾಯವೇ ಈ ಘರ್ಷಣೆಗೆ ಕಾರಣ.
ಈ ಹಿಂದೆ ಇಬ್ಬರ ನಡುವೆ ಜಗಳವಾಗಿದ್ದು, ಸುರೇಶ್ ತಾನಾಗಿ ಶೈತಾನ್ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಶೈತಾನ್ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.