ಕೆನಡಾ,ಡಿ. 2: ಇತ್ತೀಚೆಗೆ ಮಾನವೀಯ ಮೌಲ್ಯ ಅನ್ನೋದು ಮರೆಯಾಗಿದೆ. ಏನೋ ಸಮಸ್ಯೆ ಆಯಿತು ಎಂದು ಅಂಗಲಾಚಿ ಬೇಡಿದರೂ ಸಹಾಯಕ್ಕೆ ಬಾರದ ಜನರನ್ನು ನೀವು ಕಂಡಿರಬಹುದು. ಆದ್ರೆ ಭಾರತದ ಟ್ಯಾಕ್ಸಿ ಚಾಲಕರೊಬ್ಬರ ಮಾನವೀಯ ಕೆಲಸಕ್ಕೆ ಇಡೀ ದೇಶವೆ ಮೆಚ್ಚುಗೆ ವ್ಯಕ್ತ ಪಡಿಸುವಂತಾಗಿದ್ದು ಇಂತಹ ಮಾನವೀಯ ಹೃದಯವುಳ್ಳವರು ಇನ್ನೂ ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೆನಡಾದ ತೀವ್ರ ಹಿಮಪಾತ ಮತ್ತು ಮೈನಸ್ 23 ಡಿಗ್ರಿ ಸೆಲ್ಸಿಯಸ್‌ನ ಚಳಿಯ ನಡುವೆ ತುರ್ತು ಸಂದರ್ಭದಲ್ಲಿ ಗರ್ಭಿಣಿಯೊಬ್ಬರಿಗೆ ಭಾರತೀಯ ಮೂಲದ ಸಿಖ್ ಟ್ಯಾಕ್ಸಿ ಚಾಲಕ ವೊಬ್ಬರು ನೆರವಾಗಿದ್ದುಇದೀಗ ಹೀರೊ ಆಗಿ ಮೆಚ್ಚುಗೆ ಗಳಿಸಿದ್ದಾರೆ. ಸದ್ಯ ಈ ಸುದ್ದಿ ವೈರಲ್ (Viral Video) ಆಗಿದೆ.
ಟ್ಯಾಕ್ಸಿ ಚಾಲಕ ಹರ್ದೀಪ್ ಸಿಂಗ್ ಅವರು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದ್ದಾರೆ. ತಡರಾತ್ರಿ ಹರ್ದೀಪ್ ಸಿಂಗ್ ಅವರಿಗೆ ತುರ್ತು ಕರೆಯೊಂದು ಬಂದಿತ್ತು. ಆದರೆ ಅವರು ಸ್ಥಳಕ್ಕೆ ತಲುಪಿದಾಗ ಅಲ್ಲಿ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಾಳಲುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ನಡೆಯಲು ಕಷ್ಟವಾಗಿದ್ದು ಅವರ ಪತಿ ಮಾತ್ರ ಇದ್ದರು. ಈ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಟ್ಯಾಕ್ಸಿ ಚಾಲಕ ಹರ್ದೀಪ್, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಕೆನಾಡದ ಕ್ಯಾಲ್ಗರಿಯ ಕಠಿಣ ಹವಾಮಾನವು ತುರ್ತುಸ್ಥಿತಿಗೆ ಕಾರಣವಾಗಿದ್ದು ತಾಪಮಾನವು ಮೈನಸ್ 23 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು ಮತ್ತು ರಸ್ತೆಗಳಲ್ಲಿ ಚಲಿಸಲು ಕೂಡ ಅಪಾಯಕಾರಿಯಾಗಿತ್ತು. ರಸ್ತೆಯಲ್ಲಿ ಸಂಚಾರ ಮಾಡುವುದೇ ದೊಡ್ಡ ಸವಾಲಾಗಿದ್ದರೂ, ಹರ್ದೀಪ್ ಅವರು ಬಹಳ ಜಾಗರೂಕತೆಯಿಂದ ಮತ್ತು ಬಲು ಬೇಗನೆ ಸುಮಾರು 3 ನಿಮಿಷಗಳ ಕಾಲದಲ್ಲಿ ಆಸ್ಪತ್ರೆ ಹತ್ತಿರ ಹೋಗಿದ್ದಾರೆ.
Viral Video: ರಷ್ಯಾಕ್ಕೆ ಬರುವವರೇ ಎಚ್ಚರ; ಉಕ್ರೇನ್ ವಶದಲ್ಲಿರುವ ಭಾರತೀಯ ಬಿಚ್ಚಿಟ್ಟ ಕರಾಳತೆ ಏನು?
ಆದರೆ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಇನ್ನು ಕೆಲವೇ ಮೀಟರ್‌ಗಳಷ್ಟು ದೂರವಿರುವಾಗಲೇ ಟ್ಯಾಕ್ಸಿಯ ಹಿಂಬದಿಯ ಸೀಟಿನಲ್ಲಿ ತಾಯಿ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಅಳುವಿನ ಶಬ್ದ ಕೇಳಿದಾಗ ಹರ್ದೀಪ್ ಸಿಂಗ್ ಅವರಿಗೆ ಖುಷಿಯ ಜೊತೆಗೆ ಒಂದು ರೀತಿಯ ಸಮಾಧಾನವಾಯಿತು. ಕೂಡಲೇ ಅವರು ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದು ವೈದ್ಯಕೀಯ ನೆರವು ಕೊಡಿಸಿದರು. ವೈದ್ಯಕೀಯ ಸಿಬ್ಬಂದಿ ಕೆಲವೇ ಕ್ಷಣಗಳಲ್ಲಿ ಹೊರಗೆ ಧಾವಿಸಿ ತಾಯಿ ಮತ್ತು ನವಜಾತ ಶಿಶುವಿನ ಆರೈಕೆಯನ್ನು ವಹಿಸಿಕೊಂಡಿದ್ದು ಇಬ್ಬರೂ ಸುರಕ್ಷಿತ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ಯಾಕ್ಸಿ ಚಾಲಕ ಖುಷಿ ವ್ಯಕ್ತ ಪಡಿಸಿದ್ದಾರೆ. ''ನನ್ನ ಟ್ಯಾಕ್ಸಿಯಲ್ಲಿ ತೆರಳುವಾಗ ಇಬ್ಬರು ಪ್ರಯಾಣಿಕರು ಹತ್ತಿದ್ದರು, ಆದರೆ ಇಳಿಯುವಾಗ ಮೂವರು ಪ್ರಯಾಣಿಕರಾಗಿದ್ದರು.ಇದು ತನ್ನ ಜೀವನದ ಅತ್ಯಂತ ಸಿಹಿ ಮತ್ತು ಮರೆಯಲಾಗದ ನೆನಪು" ಎಂದು ಹರ್ದೀಪ್ ಸಿಂಗ್ ಹೇಳಿ ಕೊಂಡಿದ್ದಾರೆ. ವೈದ್ಯರ ಸರಿಯಾದ ಸಮಯದ ಚಿಕಿತ್ಸೆಯಿಂದಾಗಿ ತಾಯಿ ಮತ್ತು ಹೆಣ್ಣು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಸದ್ಯ ಹರ್ದೀಪ್ ಸಿಂಗ್ ಅವರ ಸಮಯಪ್ರಜ್ಞೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.