ಬೆಂಗಳೂರು,ಸೆ.15: ಗ್ರಾಮೀಣ ಪ್ರದೇಶ, ನಗರ ಪ್ರದೇಶದಲ್ಲೂ ಮೂಲಭೂತ ಸೌಕರ್ಯ ಅನ್ನೋದು ಸಾರ್ವಜನಿಕರಿಗೆ ಪ್ರಮುಖವಾಗುತ್ತದೆ. ಇದೀಗ ಬೆಂಗಳೂರು ನಗರದ ಮೂಲಸೌಕರ್ಯ ಕಾಪಾಡಿಕೊಳ್ಳುವಲ್ಲಿ ಆಡಳಿತ ವಿಫಲವಾಗಿದೆ ಅನ್ನೋದಕ್ಕೆ ಮತ್ತೊಂದು ಘಟನೆ (Viral News) ಸಾಕ್ಷಿಯಾಗಿದೆ. ಕೋರಮಂಗಲದಲ್ಲಿರುವ ವಸತಿ ಸಂಕೀರ್ಣದ ಮುಂಭಾಗದಲ್ಲಿ ಹಾನಿಗೊಳಗಾಗಿದ್ದ ಫುಟ್‌ಪಾತ್ ಅನ್ನು ಸರಿಪಡಿಸಲು ಅಧಿಕಾರಿಗಳಿಗೆ ದೂರು ನೀಡಿದರೂ ಗಮನಹರಿಸದೇ ಇದ್ದಾಗ ಬೆಂಗಳೂರಿನ ಕಂಪನಿಯೊಂದರ ಸಿಇಒ ಒಬ್ಬರು ಸ್ವತಃ ತಾವೇ ಕ್ರಮ ಕೈಗೊಂಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಫುಟ್ ಪಾತ್ ದುರಸ್ತಿ ಮಾಡುವ ಮೂಲಕ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.
ಸಾರ್ವಜನಿಕರು ತಿರುಗಾಡುವ ಜಾಗದಲ್ಲೂ ಕೊರತೆ ಕಂಡುಬಂದರೂ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ಇದೀಗ ತಮ್ಮ ವಸತಿ ಸಮುಚ್ಚಯದ ಹೊರಗಿರುವ ಹಾಳಾದ ಫುಟ್ ಪಾತ್ ಬಗ್ಗೆ ನಾಗರಿಕ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು 'ಭಾರತ್‌ಅಗ್ರಿ' ಸಂಸ್ಥೆಯ ಸಿಇಒ ದೂರಿದ್ದಾರೆ.
ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕೋರಮಂಗಲದಲ್ಲಿರುವ ಫುಟ್‌ಪಾತ್ ದುರಸ್ತಿ ಮಾಡಲು ಮತ್ತು ಜನರಿಗೆ ಅನುಕೂಲ ವಾಗುವಂತೆ ಇಳಿಜಾರು ದಾರಿ ನಿರ್ಮಿಸಲು ಸ್ವತಃ 2,700 ರೂ. ವ್ಯಯಿಸಿದ್ದಾಗಿ 'ಭಾರತ್‌ಅಗ್ರಿ'ಯ ಸ್ಥಾಪಕ ಸಿದ್ಧಾರ್ಥ್ ಡಯಲಾನಿ ತಿಳಿಸಿದ್ದಾರೆ. ಈ ಘಟನೆಯ ವಿವರಗಳನ್ನು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದು, ಫುಟ್‌ಪಾತ್‌ನ ದುರಸ್ತಿಗೂ ಮುನ್ನ ಮತ್ತು ನಂತರದ ಫೋಟೋ ಹಂಚಿಕೊಂಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಗ್ರೇಟರ್ ಬೆಂಗಳೂರು ಅಥಾರಿಟಿನಂತಹ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲು ಹಲವು ಪ್ರಯತ್ನಗಳನ್ನು ಮಾಡಿದರೂ, ಫುಟ್‌ಪಾತ್ ಭಾಗವು ವರ್ಷಗಳಿಂದ ಹಾಳಾಗಿಯೇ ಉಳಿದಿತ್ತು. ಯಾವುದೇ ಸೂಕ್ತ ಪ್ರತಿಕ್ರಿಯೆ ಲಭಿಸಿರಲಿಲ್ಲ. ಅಧಿಕಾರಿಗಳ ನಿರಾಸಕ್ತಿಯಿಂದ ಬೇಸತ್ತ ಸಿದ್ಧಾರ್ಥ್, ದುರಸ್ತಿ ಕೆಲಸ ತಾವೇ ಮಾಡಲು ಮುಂದಾಗಿದ್ದಾರೆ.
Viral Video: ಮರೆಯಾದ ಮಾನವೀಯತೆ; ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!
ಕೂಲಿ ವೆಚ್ಚ ಹಾಗೂ ಸಿಮೆಂಟ್ ಹಾಗಿ ಒಟ್ಟು 2,700 ರೂಪಾಯಿ ವೆಚ್ಚ ಮಾಡಿ, ಹಾನಿಗೊಳಗಾದ ಜಾಗವನ್ನು ಸರಿಪಡಿಸಿದ್ದಾರೆ. ಈಗ ಮಕ್ಕಳನ್ನು ಕರೆದೊಯ್ಯುವ ಗಾಡಿಗಳನ್ನು ಬಳಸುವ ಪೋಷ ಕರು ಹಾಗೂ ಹಿರಿಯ ನಾಗರಿಕರು ಇದನ್ನು ಅನುಕೂಲಕರವಾಗಿ ಬಳಸಬಹುದು. ಈ ಪೋಸ್ಟ್ ಇದೀಗ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ತಾವು ಸರಿಯಾಗಿ ತೆರಿಗೆ ಪಾವತಿಸಿದ ಮೇಲೆಯೂ ನಾಗರಿಕರೇ ತಮ್ಮ ಸ್ವಂತ ವೆಚ್ಚದಲ್ಲಿ ದುರಸ್ತಿ ಮಾಡಬೇಕೇ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಬಳಕೆದಾರರೊಬ್ಬರು ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆಯೇ? ಎಂದು ಆಕ್ರೋಶ ಹೊರಹಾಕಿದ್ದಾರೆ.