ಕೋಲ್ಕತ್ತಾ, ಮೇ 5: ಇಡೀ ದೇಶವನ್ನೇ ಗಮನ ಸೆಳೆದಿದ್ದ ಪಂಚ ವಿಧಾನಸಭೆ ಚುನಾವಣೆ ಫಲಿತಾಂಶ ಮೇ 4ರಂದು ಹೊರ ಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ (West Bengal election) ಮಮತಾ ಬ್ಯಾನರ್ಜಿ ಕೋಟೆಯನ್ನು ಛಿದ್ರ ಮಾಡುವ ಮೂಲಕ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ. ಬಿಜೆಪಿ ಭರ್ಜರಿ ಜಯ ಗಳಿಸಿದ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ ಪಶ್ಚಿಮ ಬಂಗಾಳದ ಪೊಲೀಸ್ ಅಧಿಕಾರಿಗಳು ಕೂಡ ಸಂಭ್ರಮಾಚರಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಠಾಣೆಯ ಹೊರಗೆ ಪೊಲೀಸರು "ಜೈ ಶ್ರೀ ರಾಮ್" ಮತ್ತು "ಹರ್ ಹರ್ ಮಹಾದೇವ್" ಎಂದು ಕೂಗುತ್ತಾ ಹೆಜ್ಜೆ ಹಾಕಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಸರ್ಕಾರವನ್ನು ರಚಿಸಲು ಸಜ್ಜಾಗಿದೆ. ಈ ಚುನಾವಣಾ ಫಲಿತಾಂಶವು ಪಶ್ಚಿಮ ಬಂಗಾಳದಲ್ಲಿ ದಶಕಗಳ ಕಾಲ ನಡೆದಿದ್ದ ಪ್ರಾದೇಶಿಕ ಪಕ್ಷಗಳ ಆಡಳಿತಕ್ಕೆ ಕೊನೆಗೂ ಅಂತ್ಯ ಹಾಡಿದೆ. ಸದ್ಯ ಅಲ್ಲಿನ ಪೊಲೀಸ್ ಅಧಿಕಾರಿಗಳು ಕೂಡ ಭರ್ಜರಿಯಾಗಿ ಸಂಭ್ರಮಿಸಿದ್ದು, ಕುಣಿದು ಕುಪ್ಪಳಿಸಿದ್ದಾರೆ.
ವಿಡಿಯೊ ನೋಡಿ:
ಈ ವಿಡಿಯೊವನ್ನು ಬಿಜೆಪಿ ನಾಯಕ ತಜಿಂದರ್ ಬಗ್ಗಾ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಪಶ್ಚಿಮ ಬಂಗಾಳದ ಪೊಲೀಸರು ಸಮವಸ್ತ್ರದಲ್ಲೇ "ಜೈ ಶ್ರೀ ರಾಮ್" ಮತ್ತು "ಹರ್ ಹರ್ ಮಹಾ ದೇವ್" ಎಂದು ಕೂಗುತ್ತ ಡ್ಯಾನ್ಸ್ ಮಾಡಿದ್ದಾರೆ. ಟಿಎಂಸಿ ಆಡಳಿತದಿಂದ ಮುಕ್ತಿ ಸಿಕ್ಕಿದ್ದಕ್ಕೆ ಪೊಲೀಸರು ಈ ರೀತಿಯಾಗಿ ಸಂಭ್ರಮಿಸಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದ್ದು, ಈ ವಿಡಿಯೊ ಹಂಚಿಕೊಂಡಿದೆ.
ಸಂಸತ್ತಿನಲ್ಲಿಯೇ ಸಿಗರೇಟ್ ಸೇದಿದ ಟಿಎಂಸಿ ಸಂಸದ; ವಿಡಿಯೋ ವೈರಲ್
ಈ ನಡುವೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊ ಕೂಡ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಒಟ್ಟು 294 ಸ್ಥಾನಗಳ ಪೈಕಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ ನಾಯಕರು ಮತ್ತು ಅವರ ಕಾರ್ಯಕರ್ತರು ಸಹ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ರಸ್ತೆ ಬದಿಯ ಅಂಗಡಿಯಲ್ಲಿ 'ಝಾಲ್ಮುರಿ' (ಬಂಗಾಳಿ ಶೈಲಿಯ ಮಂಡಕ್ಕಿ) ಸವಿದು ಗಮನ ಸೆಳೆದಿದ್ದರು. ಈಗ ಕಾರ್ಯಕರ್ತರು ಅದೇ ಮಂಡಕ್ಕಿಯನ್ನು ಸವಿದು ಸಂಭ್ರಮಾಚರಿಸಿದ್ದಾರೆ. ಸದ್ಯ ಮಮತಾ ಬ್ಯಾನರ್ಜಿ ವಿರುದ್ಧ ಜನಸಾಮಾನ್ಯರು ಅಲ್ಲದೆ ಪೊಲೀಸರು ಕೂಡ ಆಚರಿಸಿರುವುದು ಅಚ್ಚರಿ ನೀಡಿದೆ.