ನವದೆಹಲಿ, ಜು. 14: ಇತ್ತೀಚೆಗೆ ಮದುವೆ ವಯಸ್ಸಿಗೆ ಬಂದ ಮಕ್ಕಳಿಗೆ ವಧು- ವರರನ್ನು ಹುಡುಕುವುದೇ ಪೋಷಕರಿಗೆ ದೊಡ್ಡ ತಲೆನೋವು. ಅದರಲ್ಲೂ ತಮ್ಮ ಮಕ್ಕಳಿಗೆ ಇದೇ ರೀತಿಯ ಹುಡುಗ ಅಥವಾ ಹುಡುಗಿ ಸಿಗಬೇಕು ಅನ್ನುವ ನಿರೀಕ್ಷೆ ಅವರಿಗಿರುತ್ತದೆ. ಇದೀಗ ಇದೇ ವಿಚಾರವಾಗಿ ಮ್ಯಾಚ್‌ಮೇಕರ್ ಒಂದ್ರಿಲಾ ಕಪೂರ್ ಎನ್ನುವವರು ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಬ್ರಾಹ್ಮಣ ಯುವತಿಯ ಕುಟುಂಬಸ್ಥರ ನಿರೀಕ್ಷೆಗಳನ್ನು ಕೇಳಿ ಆ ಕ್ಲೈಂಟ್ ಅನ್ನೇ ಕೈಬಿಟ್ಟಿದ್ದಾಗಿ (Viral News) ಅವರು ತಿಳಿಸಿದ್ದಾರೆ.
ಆಧುನಿಕ ಯುಗದಲ್ಲಿ ಮದುವೆಯ ವಿಚಾರದಲ್ಲಿ ಪೋಷಕರ ನಿರೀಕ್ಷೆ ಹೆಚ್ಚಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. 11 ಲಕ್ಷ ರುಪಾಯಿ ವಾರ್ಷಿಕ ಆದಾಯವಿರುವ 28 ವರ್ಷದ ಬಂಗಾಳಿ ಬ್ರಾಹ್ಮಣ ಯುವತಿಯ ಕುಟುಂಬಸ್ಥರು ತಮ್ಮ ಮಗಳಿಗೆ 1 ಕೋಟಿ ರುಪಾಯಿಗಿಂತ ಹೆಚ್ಚು ವೇತನ ಇರುವ ಬಂಗಾಳಿ ಬ್ರಾಹ್ಮಣ ವರನೇ ಬೇಕು ಎಂದು ತಲೆ ತಿಂದಿರುವ ಬಗ್ಗೆ ವಿವರಿಸಿದ್ದಾರೆ.
ವಿಡಿಯೊ ನೋಡಿ:
ಕಪೂರ್ ಅವರ ಪ್ರಕಾರ, ಯುವತಿಯ ಕುಟುಂಬವು ಪ್ರತಿಯೊಂದು ಪ್ರೊಫೈಲ್ ತಿರಸ್ಕರಿಸಿತ್ತು. ಅಂತಿಮವಾಗಿ ವಾರ್ಷಿಕ 1 ಕೋಟಿ ರುಪಾಯಿಗಿಂತ ಹೆಚ್ಚು ಹಣ ಸಂಪಾದಿಸುವ ಬಂಗಾಳಿ ಬ್ರಾಹ್ಮಣ ವರ ಅವರಿಗೆ ಬೇಕು ಎನ್ನುವುದು ತಿಳಿಯಿತು ಎಂದು ವೃತ್ತಿಪರ ಮ್ಯಾಚ್‌ಮೇಕಿಂಗ್ ಪ್ಲಾಟ್‌ಫಾರ್ಮ್ ನಡೆಸುವ ಒಂದ್ರಿಲಾ ಕಪೂರ್ ವಿಡಿಯೊದಲ್ಲಿ ತಿಳಿಸಿದ್ದಾರೆ.
ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಉದ್ಯೋಗಿ
ವಧುವಿನ ಮನೆಯವರು ಆರಂಭದಲ್ಲಿ ಒಳ್ಳೆಯ ಕುಟುಂಬದ, ಉತ್ತಮ ಉದ್ಯೋಗ ಹೊಂದಿದ ವಿದ್ಯಾವಂತ ಹುಡುಗ ಸಾಕು ಎಂದು ತಿಳಿಸಿತ್ತು. ಇದರ ಆಧಾರದ ಮೇಲೆ ಕಪೂರ್ ಅವರ ತಂಡವು ಯುವತಿಯ ವಯಸ್ಸಿನ ಆಧಾರದ ಮೇರೆಗೆ ಗೌರವಾನ್ವಿತ ಕುಟುಂಬಗಳಿಗೆ ಸೇರಿದ, ಹಲವು ಯುವಕರ ಪ್ರೊಫೈಲ್ ಕಳುಹಿಸಿದೆ. ಆದರೆ ಯಾವುದೇ ಸ್ಪಷ್ಟ ಕಾರಣ ನೀಡದೆ ಯುವತಿಯ ಕುಟುಂಬ ಎಲ್ಲವನ್ನೂ ತಿರಸ್ಕರಿಸಿತು.
ಕಪೂರ್ ಅವರ ತಂಡವು ಕೊನೆಗೆ ಯುವತಿ ಕುಟುಂಬದ ಬೇಡಿಕೆ ಏನು ಎಂಬುದನ್ನು ವಿಚಾರಿಸಿದೆ. ಅವರ ಬೇಡಿಕೆ ಕೇಳಿ ಅಚ್ಚರಿಗೆ ಒಳಗಾಗಿದೆ. ಆ ಕುಟುಂಬ ಆಯ್ಕೆ ಮಾಡಿದ ಪ್ರತಿಯೊಬ್ಬ ಯುವಕನ ಸಂಬಳ ಒಂದು ಕೋಟಿ ರುಪಾಯಿಗೂ ಅಧಿಕವಾಗಿತ್ತು. ಕೊನೆಗೆ ಕಪೂರ್ ತಂಡವು ಆ 1 ಕೋಟಿ ರುಪಾಯಿ ಗಳಿಸುವ ಹುಡುಗರನ್ನು ಸಂಪರ್ಕಿಸಿದಾಗ ಯಾರೊಬ್ಬರೂ ಈ ಯುವತಿಯನ್ನು ಒಪ್ಪಿಕೊಳ್ಳಲಿಲ್ಲ. ಈ ಕಾರಣದಿಂದಾಗಿ ಒಂದ್ರಿಲಾ ಕಪೂರ್ ಆ ಕ್ಲೈಂಟ್ ಕೈಬಿಟ್ಟರು. ಅಷ್ಟೊಂದು ದೊಡ್ಡ ಮೊತ್ತ ಗಳಿಸುವ ಪುರುಷರು ಕುರುಡರಲ್ಲ. ಅವರಿಗೆ ಯುವತಿಯರ ಅತಿಯಾದ ನಿರೀಕ್ಷೆ ಅರ್ಥವಾಗುತ್ತವೆ ಎಂದು ವಿಡಿಯೊದಲ್ಲೇ ಕಿಡಿಕಾರಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು ಇಂದಿನ ಯುವತಿಯರು ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಹಣವಷ್ಟೇ ಮುಖ್ಯ ಎಂದು ಕಿಡಿಕಾರಿದ್ದಾರೆ.