ಬೀಜಿಂಗ್, ಮೇ 1: ವೈದ್ಯಕೀಯ ಜಗತ್ತಿನಲ್ಲಿ ಹಲವು ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಚೀನಾದಲ್ಲಿ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರ ತಲೆಯಲ್ಲಿ ಗುಂಡು ಇರುವುದು ಬರೋಬ್ಬರಿ 23 ವರ್ಷಗಳ ನಂತರ ಗೊತ್ತಾಗಿದೆ. ಈ ಘಟನೆ ಚೀನಾದ ಹೆಬೈಯಲ್ಲಿ ನಡೆದಿದೆ. ಇತ್ತೀಚಿನ ಹಲವು ದಿನಗಳಿಂದ ಅವರಿಗೆ ಪದೇ ಪದೆ ಪ್ರಜ್ಞೆ ತಪ್ಪುತ್ತಿತ್ತು. ಹೀಗಾಗಿ ವೈದ್ಯರ ಬಳಿ ಪರೀಕ್ಷೆಗೆಂದು ಬಂದಾಗ ಸ್ಕ್ಯಾನ್ ಮಾಡಲಾಯಿತು. ಈ ಸಂದರ್ಭದಲ್ಲಿ ಮೆದುಳಿನ ಭಾಗದಲ್ಲಿ ಗುಂಡು ಪತ್ತೆಯಾಗಿದೆ. ಇದನ್ನು ತಿಳಿದ ವೈದ್ಯರೇ ಅಚ್ಚರಿ ವ್ಯಕ್ತ ಪಡಿಸಿದ್ದು ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ಚೀನಾದ ವಾಂಗ್ ಎನ್ನುವ ವ್ಯಕ್ತಿ ವೈದ್ಯರನ್ನು ಭೇಟಿಯಾದ ನಂತರ ಅಚ್ಚರಿಗೆ ಒಳಗಾದರು. ಯಾಕೆಂದರೆ ಅವರ ಅನಾರೋಗ್ಯದ ಕಾರಣವು ಸಿಟಿ ಸ್ಕ್ಯಾನ್ ನಂತರ ಸ್ಪಷ್ಟವಾಯಿತು. ಸುಮಾರು 23 ವರ್ಷಗಳ ಹಿಂದಿನ ಬುಲೆಟ್ ಅವರ ತಲೆಯಲ್ಲಿ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಕೆಲವು ವರ್ಷಗಳ ಹಿಂದೆ ಮನೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ತಲೆಬುರುಡೆಗೆ ಪೆಟ್ಟು ಬಿದ್ದ ಅನುಭವವಾಗಿತ್ತು ಎಂದು ವಾಂಗ್ ನೆನಪಿಸಿಕೊಂಡಿದ್ದಾರೆ.
ಆಗ ಯಾರೋ ಕಿಡಿಗೇಡಿಗಳು ಹೊಡೆದ ಕಲ್ಲು ತನಗೆ ತಾಗಿರಬಹುದು ಭಾವಿಸಿದ್ದರು. ಗಾಯಕ್ಕೆ ಹತ್ತಿರದ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಇದನ್ನು ಮರೆತೇ ಬಿಟ್ಟಿದ್ದರು. ಆದಾದ ನಂತರ ಯಾವುದೇ ಸಮಸ್ಯೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಪದೇ ಪದೆ ಪ್ರಜ್ಞೆ ತಪ್ಪುವ ಸಮಸ್ಯೆ ಕಾಣಿಸಿಕೊಂಡಿದೆ. ಇದರ ತಪಾಸಣೆಗಾಗಿ ಹೋದಾಗ ಗುಂಡು ಇರುವುದು ಪತ್ತೆಯಾಗಿದೆ.
ಹಾಡ ಹಗಲೇ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
ಗುಂಡು ಕಡಿಮೆ ವೇಗದಲ್ಲಿ ತಲೆಬುರುಡೆಗೆ ಬಡಿದು, ಮೆದುಳಿನ ಮುಖ್ಯ ರಚನೆಗಳನ್ನು ತಪ್ಪಿಸಿ, ಸುರಕ್ಷಿತ ಪ್ರದೇಶದಲ್ಲಿ ಉಳಿದುಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಮೆದುಳಿನ ಯಾವುದೇ ಭಾಗಗಳಿಗೆ ಹಾನಿ ಮಾಡದೆ ಹಾಗೂ ರಕ್ತನಾಳಗಳಿಗೆ ಹಾನಿ ಮಾಡದೆ ಒಂದು ಸುರಕ್ಷಿತ ಜಾಗದಲ್ಲಿ ಇತ್ತು. ಇದರಿಂದಾಗಿ ಯಾವುದೇ ಅಪಾಯ ಇದ್ದಿರಲಿಲ್ಲ. ಆದರೆ ಬುಲೆಟ್ ಮೆದುಳಿನ ಒಳಗಿನ ಶಸ್ತ್ರಚಿಕಿತ್ಸೆಗಳು ಸಾಕಷ್ಟು ಅಪಾಯಕಾರಿಯಾಗಿದ್ದು, ರೋಗಿಯ ಜೀವಕ್ಕೆ ಅಪಾಯ ಉಂಟು ಮಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ಚೀನಾದಲ್ಲಿ ಇನ್ನೊಂದು ಆತಂಕಕಾರಿ ಘಟನೆಯೊಂದು ನಡೆದಿತ್ತು. 20 ವರ್ಷಗಳ ಕಾಲ ಹೊಟ್ಟೆಯಲ್ಲಿದ್ದ ಥರ್ಮಾ ಮೀಟರ್ ಇತ್ತೀಚೆಗೆ ಪತ್ತೆಯಾಗಿದ್ದು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರಕ್ಕೆ ತೆಗೆದಿದ್ದರು. ಬಾಲ್ಯದಲ್ಲಿ ಅಚಾನಕ್ಕಾಗಿ ನುಂಗಿದ್ದ ಥರ್ಮಾ ಮೀಟರ್ ಹೊಟ್ಟೆಯಲ್ಲಿಯೇ ಪತ್ತೆಯಾಗಿತ್ತು.