ಗಾಂಧಿನಗರ: ಅಹಮದಾಬಾದ್‌ನ ನೋಬಲ್‌ನಗರದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತ ವಯಸ್ಸಿನ ಚಾಲಕನೊಬ್ಬ ಕಾರು ಚಲಾಯಿಸುತ್ತಿರುವಾಗ ಅದರಡಿಗೆ ಸಿಲುಕಿದ್ದ ಮೂರು ವರ್ಷದ ಬಾಲಕಿ ಪವಾಡ ಸದೃಶ ಎಂಬಂತೆ ಪಾರಾಗಿದ್ದಾಳೆ. ಈ ಘಟನೆಯ ಸಿಸಿಟಿವಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅಹಮದಾಬಾದ್ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಕ್ಟೋಬರ್ 29ರಂದು ಮೂರು ವರ್ಷದ ಬಾಲಕಿ ತನ್ನ ಮನೆಯ ಹೊರಗಿನ ಆವರಣದಲ್ಲಿ ಆಟ ವಾಡುತ್ತಿದ್ದಾಗ ಅಪ್ರಾಪ್ತ ವಯಸ್ಸಿನ ಚಾಲಕ ಬಾಲಕಿಯನ್ನು ಗಮನಿಸದೆ ಕಾರನ್ನು ಹರಿಸಿದ್ದಾನೆ. ಕಾರು ಬಾಲಕಿಯ ಮೇಲೆ ಹರಿದರೂ, ಸ್ಥಳೀಯರ ಕೂಗಿನಿಂದ ಕಾರನ್ನು ನಿಲ್ಲಿಸಿದ್ದಾನೆ. ಈ ಸಂದರ್ಭ ದಲ್ಲಿ ಬಾಲಕಿ ಕಾರಿನ ಕೆಳಗಿನಿಂದ ತೆವಳುತ್ತಾ ರಕ್ಷಿಸಿಕೊಂಡಿರುವ ದೃಶ್ಯ ಕಂಡುಬಂದಿವೆ. ವಿಡಿಯೊದಲ್ಲಿ ಬಾಲಕಿ ಕಾರಿನ ಅಡಿಯಿಂದ ತಾನೇ ತೆವಳಿಕೊಂಡು ಹೊರಬಂದು ನಿಲ್ಲುವುದು ಕಾಣುತ್ತದೆ.
ವೈರಲ್ ವಿಡಿಯೊ ಇಲ್ಲಿದೆ:
ನಂಬರ್ ಪ್ಲೇಟ್ ಇಲ್ಲದ ಕಾರನ್ನು ಅಪ್ರಾಪ್ತ ವಯಸ್ಸಿನ ಬಾಲಕ ಚಲಾಯಿಸಿದ್ದು ಈ ಸಂದರ್ಭದಲ್ಲಿ ಕೋಪಗೊಂಡ ಸ್ಥಳೀಯ ಮಹಿಳೆಯೊಬ್ಬರು ಅಪ್ರಾಪ್ತ ಚಾಲಕನಿಗೆ ಕಪಾಳಮೋಕ್ಷ ಮಾಡಿರುವುದು ಸಹ ವಿಡಿಯೊದಲ್ಲಿ ಕಂಡು ಬಂದಿದೆ. ಆದಾಗ್ಯೂ, ಹುಡುಗಿ ಪವಾಡ ಸದೃಶವಾಗಿ ಬದುಕುಳಿದು ಕಾರಿನ ಕೆಳಗಿನಿಂದ ತೆವಳುತ್ತಾ ಬಂದು ಎದ್ದು ನಿಂತಿದ್ದಾಳೆ.
ಇದನ್ನು ಓದಿ:Viral Video: ಸ್ನೇಹಿತೆಯ ಮನೆಗೇ ಕನ್ನ ಹಾಕಿದ ಮಹಿಳಾ ಪೊಲೀಸ್ ಅಧಿಕಾರಿ; ಸಿಸಿಟಿವಿ ವಿಡಿಯೊ ವೈರಲ್
ಈ ಘಟನೆಯ ಕುರಿತು ಅಹಮದಾಬಾದ್ ಪೊಲೀಸರು ತಕ್ಷಣವೇ ಪ್ರತಿಕ್ರಯಿಸಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು ಮೋಟಾರು ವಾಹನ ಕಾಯ್ದೆ ಸೆಕ್ಷನ್ 177, 184, 181ರ ಅಡಿ ದೂರು ದಾಖಲಿಸಲಾಗಿದೆ. ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆ ಹಾಗೂ ಮಾನವ ಜೀವಕ್ಕೆ ಅಪಾಯ ತರು ವಂತಹ ಕೃತ್ಯದ ಅಡಿಯಲ್ಲಿ ಕಾನೂನು ಕ್ರಮ ಕೈಗೊಂಡಿದ್ದಾರೆ
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪ್ರಾಪ್ತ ವಯಸ್ಕ ಅಥವಾ ಪರವಾನಗಿ ಪಡೆಯದ ವ್ಯಕ್ತಿಗೆ ವಾಹನವನ್ನು ಚಲಾಯಿಸಲು ಎಂದಿಗೂ ಅವಕಾಶ ನೀಡಬೇಡಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಪವಾಡಗಳೂ ಹೀಗೂ ನಡೆಯುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.