ತಿರುವನಂತಪುರ: ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ವಿ.ಎಸ್. ಸುಜಿತ್ ಎಂಬುವವರಿಗೆ ಪೊಲೀಸ್ ಠಾಣೆಯೊಳಗೆ ಆರಕ್ಷಕರು ಮನಬಂದಂತೆ ಥಳಿಸಿರುವ ಘಟನೆ ಕೇರಳ (Kerala) ರಾಜ್ಯದ ಕುನ್ನಂಕುಲಂ ಠಾಣೆಯಲ್ಲಿ ನಡೆದಿದೆ. 2023ರಲ್ಲಿ ನಡೆದ ಘಟನೆ ಇದಾಗಿದ್ದು, ಇತ್ತೀಚೆಗೆ ಇದರ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ಇದರ ವಿಡಿಯೊ ವೈರಲ್ (Viral Video) ಆಗುತ್ತಿದ್ದಂತೆ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ (ಕೆಎಸ್‌ಎಚ್‌ಆರ್‌ಸಿ) ತನಿಖೆ ಆರಂಭಿಸಿದೆ.
ಠಾಣೆಗೆ ಕರೆಸಿ ವ್ಯಕ್ತಿಗೆ ಮನಬಂದಂತೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸುವಂತೆ ಆಯೋಗವು ತ್ರಿಶೂರ್ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ. ದೀರ್ಘ ಕಾನೂನು ಹೋರಾಟದ ನಂತರ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸುಜಿತ್ ಅವರು ಈ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ.
ಸುಜಿತ್ ಅವರ ಪ್ರಕಾರ, ಚೋವನ್ನೂರಿನಲ್ಲಿ ತನ್ನ ಸ್ನೇಹಿತರಿಗೆ ಬೆದರಿಕೆ ಹಾಕಿದ್ದ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ಅವರನ್ನು ಏಪ್ರಿಲ್ 5, 2023 ರಂದು ವಶಕ್ಕೆ ತೆಗೆದುಕೊಳ್ಳಲಾಯಿತು. ಸ್ಟೇಷನ್ ಲಾಕ್-ಅಪ್ ಒಳಗೆ ಐದು ಅಧಿಕಾರಿಗಳು ತಮ್ಮನ್ನು ಥಳಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.
ವಿಡಿಯೊ ವೀಕ್ಷಿಸಿ:
ಥಳಿತದ ದೃಶ್ಯವಿರುವ ವಿಡಿಯೊ ಬಿಡುಗಡೆಯಾದ ನಂತರ ಪ್ರತಿಪಕ್ಷಗಳು ಸರ್ಕಾರದ ಮೇಲೆ ಒತ್ತಡ ಹೇರಿವೆ. ಪ್ರತಿಪಕ್ಷ ನಾಯಕ ವಿ.ಡಿ. ಸತೀಸನ್ ಈ ಘಟನೆಯನ್ನು ಕೇರಳದ ಆತ್ಮಸಾಕ್ಷಿಯ ಮೇಲಿನ ಕಪ್ಪು ಚುಕ್ಕೆ ಎಂದು ಕರೆದಿದ್ದಾರೆ. ಅಲ್ಲದೆ, ಸರ್ಕಾರವು ಖಾಕಿ ಧರಿಸಿದ ಕ್ರಿಮಿನಲ್ ಗ್ಯಾಂಗ್‌ಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು. “ಈ ಆರಕ್ಷಕರು ಪೊಲೀಸ್ ಠಾಣೆಗಳನ್ನು ಕೊಲೆ ಕ್ಷೇತ್ರಗಳನ್ನಾಗಿ ಮಾಡಲು ಹಿಂಜರಿಯದ ಅಪರಾಧಿಗಳ ಗುಂಪಾಗಿದ್ದಾರೆ. ಇಂತಹ ಗುಂಪುಗಳನ್ನು ಸಿಪಿಐಎಂ ಮತ್ತು ಅವುಗಳನ್ನು ನಿಯಂತ್ರಿಸುವ ಭೂಗತ ಲೋಕದ ಗುಂಪುಗಳು ಪೋಷಿಸುತ್ತಿವೆ” ಎಂದು ಸತೀಸನ್ ಆರೋಪಿಸಿದರು.
ಗೃಹ ಇಲಾಖೆಯ ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿಯ ವಿರುದ್ಧ ಟೀಕಾಪ್ರಹಾರ ನಡೆಸಿದ ಸತೀಸನ್, ಇಂತಹವರು ನಿಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಘಟನೆಯಲ್ಲಿ ಭಾಗಿಯಾದ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಒತ್ತಾಯಿಸಿದರು. ಈ ಸಂಬಂಧ ಬುಧವಾರ ರಾತ್ರಿ ಕುನ್ನಂಕುಲಂ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
2023 ರಲ್ಲಿ ಲಾಕಪ್‍ನಲ್ಲಿ ಚಿತ್ರಹಿಂಸೆ ನೀಡಿದ್ದ ದೂರು ದಾಖಲಾದ ನಂತರ ಐವರು ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುನ್ನಂಕುಲಂನ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್‍ನಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.
ಇದನ್ನೂ ಓದಿ: Viral Video: ಸುಮೋ ಜೊತೆ ಕಾದಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್ ಪುತ್ರ ಎರಿಕ್; ಆಮೇಲೆನಾಯ್ತು ಗೊತ್ತಾ? ಈ ವಿಡಿಯೊ ನೋಡಿ