ನವದೆಹಲಿ, ಜ. 3: ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಎನ್ನುವುದು ವಿಶೇಷ ಬಂಧನ. ತಮ್ಮ ಕುಟುಂಬದವರು, ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿ ಬಳಿಕ ಪ್ರತೀ ವರ್ಷ ಈ ವಿವಾಹದ ದಿನವನ್ನು ಸೆಲಬ್ರೇಟ್ ಮಾಡಿಕೊಳ್ಳುವುದನ್ನು ಬಹುತೇಕರು ಇಷ್ಟ ಪಡುತ್ತಾರೆ. ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ರೆಸ್ಟೋರೆಂಟ್, ರೆಸಾರ್ಟ್ ಎಂದು ಸುತ್ತಾಡಿ ಕೇಕ್ ಕಟ್ ಮಾಡಿ ಸೆಲಬ್ರೇಟ್ ಮಾಡಿಕೊಳ್ಳುವವರು ಒಂದೆಡೆಯಾದರೆ ಇನ್ನೊಂದೆಡೆ ಮನೆಯಲ್ಲಿಯೇ ಸಿಂಪಲ್ಲಾಗಿ ಸೆಲಬ್ರೇಟ್ ಮಾಡಿಕೊಳ್ಳುವವರು ಕೂಡ ಇದ್ದಾರೆ. ಇಲ್ಲೊಂದು ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿಮಾನದಲ್ಲಿ ಆಚರಿಸಿಕೊಂಡಿದ್ದ ಘಟನೆ ಇತ್ತೀಚೆಗೆ ನಡೆದಿದೆ. ವಿಮಾನ ಹಾರಾಟದ ವೇಳೆಯಲ್ಲಿಯೇ ಎಮಿರೇಟ್ಸ್ ಕ್ಯಾಬಿನ್ ಸಿಬ್ಬಂದಿಯೊಬ್ಬರು ಕೇಕ್ ತಂದಿದ್ದಾರೆ. ಪತಿಯೇ ಈ ಸರ್‌ಪ್ರೈಸ್ ಸಲಬ್ರೇಶನ್ ಆಯೋಜಿಸಿದ್ದು ತಿಳಿದುಬಂದಿದೆ. ಅದಕ್ಕೆ ವಿಮಾನದ ಸಿಬಂದಿ ಕೂಡ ಸಹಕರಿಸಿದ್ದನ್ನು ಕಾಣಬಹುದು. ಸದ್ಯ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ವೆಡ್ಡಿಂಗ್ ಆ್ಯನಿವರ್ಸರಿಯನ್ನು ಮನೆಯಲ್ಲಿ, ಹೊಟೇಲ್‌ನಲ್ಲಿ ಆಚರಿಸುವುದು ಸಾಮಾನ್ಯ. ಆದರೆ ಅವೆಲ್ಲಕ್ಕಿಂತ ಭಿನ್ನ ವಾಗಿ ಏರ್‌ಬಸ್ A380 ವಿಮಾನದಲ್ಲಿ 40,000 ಅಡಿ ಎತ್ತರದಲ್ಲಿ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು ಅದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಮಾನ ಒಳಗೆ ಎಮಿರೇಟ್ಸ್‌ನ ಈ ಸೇವೆಯ ಬಗ್ಗೆ ಈ ವಿಡಿಯೊದಲ್ಲಿ ತಿಳಿಸಲಾಗಿದ್ದು, ವಿಡಿಯೊ ನೆಟ್ಟಿಗರ ಗಮನ ಸೆಳೆಯುತ್ತಿದೆ.
ವಿಡಿಯೊ ನೋಡಿ:
ವಿಮಾನದ ಒಳಗೆ ಎಮಿರೇಟ್ಸ್ ಕ್ಯಾಬಿನ್‌ನಲ್ಲಿದ್ದ ಮಹಿಳೆಯೊಬ್ಬರು ದಂಪತಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುವ ಸಲುವಾಗಿ ಕೇಕ್, ವೈನ್ ಹಿಡಿದುಕೊಂಡು ಬರುತ್ತಿರುವ ದೃಶ್ಯವನ್ನು ಕಾಣಬಹುದು. ವೈರಲ್ ಆದ ವಿಡಿಯೊದಲ್ಲಿ ದಂಪತಿಯ ವಿವಾಹ ವಾರ್ಷಿಕೋತ್ಸವ ಇದ್ದ ಕಾರಣ ಪತಿ ಈ ಒಂದು ಸರ್‌ಪ್ರೈಸ್ ಸಲಬ್ರೇಶನ್ ಪ್ಲ್ಯಾನ್ ಮಾಡಿದ್ದು ತಿಳಿದುಬಂದಿದೆ. ಅದಕ್ಕೆ ವಿಮಾನದ ಸಿಬಂದಿ ಕೂಡ ಸಹಕರಿಸಿದ್ದನ್ನು ವಿಡಿಯೊದಲ್ಲಿ ಕಾಣಬಹುದು. ಪತಿ ತನಗೆ ಸರ್‌ಪ್ರೈಸ್ ನೀಡುತ್ತಿರುವುದನ್ನು ಅರಿಯದ ಮಹಿಳೆಯು ಕೇಕ್ ಕಂಡು ಶಾಕ್ ಆಗಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆ ಗಳಿಸುತ್ತಿದೆ.
ಚಲಿಸುತ್ತಿದ್ದ ಕಾರಿನ ಟಾಪ್ ಮೇಲೆ ಕುಳಿತು ಜೋಡಿಯ ರೊಮ್ಯಾನ್ಸ್!
ಪತಿಯು ಈ ಸಲಬ್ರೇಶನ್ ಪೋಸ್ಟ್ ಹಂಚಿಕೊಂಡಿದ್ದಾನೆ. ʼʼಆಕಾಶದಲ್ಲಿ 40,000 ಅಡಿ ಎತ್ತರದಲ್ಲಿ ಅಚ್ಚರಿಯ ಕೇಕ್‌ನೊಂದಿಗೆ ನಮ್ಮ ವಿವಾಹ ವಾರ್ಷಿಕೋತ್ಸವ ವನ್ನು ಆಚರಿಸುತ್ತಿದ್ದೇನೆʼʼ ಎಂದು ಬರೆದಿದ್ದಾರೆ. ʼʼಸಾಮಾನ್ಯ ಪ್ರಯಾಣವನ್ನು ಬದಲಾಯಿಸಿ ನಮ್ಮ ಬದುಕಿನಲ್ಲಿ ಮರೆಯಲಾಗದ ಸುಮಧುರ ಅನುಭವ ಕೊಟ್ಟ ಈ ಸವಿ ನೆನಪಾಗಿ ಎಮಿರೇಟ್ಸ್‌ಗೆ ಧನ್ಯವಾದಗಳುʼʼ ಎಂದು ಅವರು ತಿಳಿಸಿದ್ದಾರೆ.
ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ವಿಮಾನಯಾನ ಸಂಸ್ಥೆ ಮತ್ತು ಅದರ ಸಿಬ್ಬಂದಿಯ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಕ್ಷಣ ಎಂತವರಿಗಾದರು ಖುಷಿ ತರಿಸುವಂತಿದೆ. ತುಂಬ ಸುಂದರವಾದ ಇಂತಹ ಕ್ಷಣಗಳನ್ನು ಪ್ರಯಾಣಿಕರಿಗೆ ನೀಡಿದ ವಿಮಾನ ಸಂಸ್ಥೆಯ ಸಿಬಂದಿಯ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಆಕಾಶದಲ್ಲಿ ವಾರ್ಷಿಕೋತ್ಸವವನ್ನು ಆಚರಿಸುವುದೇ ಒಂದು ವಿಭಿನ್ನ ಆಲೋಚನೆಯಾಗಿದ್ದು, ಆ ದಂಪತಿ ನಿಜಕ್ಕೂ ಪುಣ್ಯ ಮಾಡಿದ್ದಾರೆ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.