ಹರಾರೆ, ಏ. 22: ನೀವು ಆರಾಮವಾಗಿ ಕುಳಿತು ಹೋಟೆಲ್ ಒಂದರಲ್ಲಿ ಆಹಾರ ಸವಿಯುತ್ತಿದ್ದಂತೆ ಮೊಸಳೆ ನುಗ್ಗಿ ಬಂದರೆ ಏನಾಗಬಹುದು ಎಂದು ಒಮ್ಮೆ ಊಹಿಸಿಕೊಳ್ಳಿ. ಯಾಕಂದರೆ ಇತ್ತೀಚೆಗೆ ಇದೇ ರೀತಿಯ ಘಟನೆ ಜಿಂಬಾಬ್ವೆಯ ಹೋಟೆಲ್ ಒಂದರಲ್ಲಿ ನಡೆದಿದೆ. ಪ್ರವಾಸಿಗರು ಕುಳಿತು ತಿಂಡಿ ಸವಿಯುತ್ತಿದ್ದಂತೆ ಐಷಾರಾಮಿ ಹೋಟೆಲ್‌ಗೆ 12 ಅಡಿ ಉದ್ದದ ಮೊಸಳೆಯೊಂದು ನುಗ್ಗಿದೆ. ಈ ದೃಶ್ಯ ಕಂಡ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಸುಮಾರು 12 ಅಡಿ ಉದ್ದದ ಮೊಸಳೆ ಹೋಟೆಲ್ ಆವರಣದಲ್ಲಿ ಶಾಂತವಾಗಿ ತೆವಳುತ್ತ ಕೌಂಟರ್ ಒಳಗೆ ನುಗ್ಗಿದೆ. ಜಾಂಬೆಜಿ ನದಿ ದಡದಲ್ಲಿರುವ ಈ ಹೋಟೆಲ್‌ಗೆ ಬೆಳಗ್ಗಿನ ಸಮಯದಲ್ಲಿಯೇ ಮೊಸಳೆ ನೇರವಾಗಿ ನುಗ್ಗಿ ಬಂದಿದೆ. ಹೋಟೆಲ್ ಸಿಬ್ಬಂದಿ ತಕ್ಷಣ ಇದನ್ನು ಗಮನಿಸಿ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ವನ್ಯಜೀವಿ ಅಧಿಕಾರಿಗಳಿಗೆ ಕೂಡಲೇ ತಿಳಿಸಿದ್ದಾರೆ. ಆ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದೆ.
ವಿಡಿಯೊ ನೋಡಿ:
ಸುಮಾರು 12 ಅಡಿ ಉದ್ದದ ಮೊಸಳೆ ಹೋಟೆಲ್ ಆವರಣದಲ್ಲಿ ಶಾಂತವಾಗಿ ತೆವಳುತ್ತ ಕೌಂಟರ್ ಬಳಿಗೆ ತೆರಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ ಆಹಾರದ ಹುಡುಕಾಟದಲ್ಲಿದ್ದ ಮೊಸಳೆ ಕೌಂಟರ್ ಮೇಲೆ ಹೋಗಿ ಅಲ್ಲಿಂದ ನೇರವಾಗಿ ಕಿಚನ್‌ಗೆ ತೆರಳಿದೆ. ಅಲ್ಲಿ ಆಹಾರ ಸಿಗದಿದ್ದಾಗ, ಹೋಟೆಲ್‌ನ ಸೋಫಾ ಮೇಲೆ ವಿಶ್ರಾಂತಿ ಪಡೆದಿದೆ.
ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್
ನೀರಾನೆ, ಆನೆ ಮತ್ತು ಮೊಸಳೆ ಸೇರಿ ವನ್ಯಜೀವಿಗಳು ಈ ಹೋಟೆಲ್ ಇರುವ ಪ್ರದೇಶದಲ್ಲಿವೆ. ವನ್ಯಜೀವಿ ಅಧಿಕಾರಿಗಳು ಈ ಪ್ರಾಣಿ ನೈಲ್ ಮೊಸಳೆ ಎಂದು ದೃಢ ಪಡಿಸಿದ್ದಾರೆ. ಇದು ಆಫ್ರಿಕಾದ ಅತಿದೊಡ್ಡ ಸಿಹಿನೀರಿನ ಪರಭಕ್ಷಕ ಪ್ರಾಣಿ ಎನಿಸಿಕೊಂಡಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಜಿಂಬಾಬ್ವೆ ವನ್ಯಜೀವಿ ಮಂಡಳಿಯ ರೇಂಜರ್‌ಗಳು, ವಿಶೇಷ ಉಪಕರಣಗಳನ್ನು ಬಳಸಿ ಮೊಸಳೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ನದಿಗೆ ಬಿಟ್ಟಿದ್ದಾರೆ. ಈ ಬಗ್ಗೆ ಅಲ್ಲಿನ ಹೋಟೆಲ್ ಹಾಸ್ಯದೊಂದಿಗೆ ವಿಡಿಯೊ ಹಂಚಿಕೊಂಡಿದೆ, "ನಮ್ಮ ಹೊಸ ಅತಿಥಿ ರೂಮ್ ಸರ್ವಿಸ್ ಏಕೆ ತಡವಾಯಿತು ಎಂದು ಕೇಳಲು ಬಂದಿದ್ದರು. ಇದು ಜಾಂಬೆಜಿ ನದಿ ತೀರ, ಇಲ್ಲಿ ಪ್ರಕೃತಿ ಬಹಳಷ್ಟು ಸಹಜವಾಗಿದೆ" ಎಂದು ಬರೆದುಕೊಂಡಿದೆ.