ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮದುವೆಯಂದು ಕುದುರೆ ಸವಾರಿ ಮಾಡಿದ್ದಕ್ಕಾಗಿ ದಲಿತ ವರನ ಮೇಲೆ ಹಲ್ಲೆ; ಗುಜರಾತ್‌ನಲ್ಲೊಂದು ಅಮಾನವೀಯ ಘಟನೆ

Dalit groom attacked: ವಿವಾಹದ ಸಂದರ್ಭದಲ್ಲಿ ದಲಿತ ವರನು ಕುದುರೆ ಸವಾರಿ ಮಾಡಿದ ಕಾರಣ ಆತನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ. ಗುಜರಾತ್‌ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ವರ್ಗಭೇದದಿಂದ ಉಂಟಾದ ಹಿಂಸಾತ್ಮಕ ಘಟನೆ ಎಂದು ಹೇಳಲಾಗಿದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಪುರಾತನ ಜಾತಿ ವ್ಯವಸ್ಥೆ ಇನ್ನೂ ತೊಲಗಿಲ್ಲ ಎಂಬುದು ವಿಚಾರವೇ ಆತಂಕ ಮೂಡಿಸುತ್ತಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ.

ಕುದುರೆ ಸವಾರಿ ಮಾಡಿದ್ದಕ್ಕಾಗಿ ದಲಿತ ವರನ ಮೇಲೆ ಹಲ್ಲೆ

ಗಾಂಧಿನಗರ, ಫೆ. 2: ಮದುವೆ ದಿನ ಕುದುರೆ ಸವಾರಿ ಮಾಡಿದ್ದಕ್ಕಾಗಿ ದಲಿತ ವರನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಗುಜರಾತ್‌ನಲ್ಲಿ (Gujarat) ಸಂಭವಿಸಿದೆ. ಭಾರತವು ಜಾಗತಿಕ ತಂತ್ರಜ್ಞಾನದಲ್ಲಿ ಭಾರಿ ಮುಂದುವರಿದಿದೆ ಮತ್ತು ಸೂಪರ್ ಪವರ್ ಎಂದು ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಿರುವ ಈ ಯುಗದಲ್ಲಿ ಗುಜರಾತ್‌ನ ಪಠಾಣ್ ಜಿಲ್ಲೆಯ ಹಳ್ಳಿಯಲ್ಲಿ ನಡೆದ ಈ ಘಟನೆ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ. ದೇಶದೊಳಗೆ ಇನ್ನೂ ಕಾಡುತ್ತಿರುವ, ಆಳವಾಗಿ ಬೇರೂರಿರುವ ಜಾತಿ ಬಿರುಕುಗಳನ್ನು ಇದು ನೆನಪಿಸುತ್ತದೆ (Dalit groom attacked).

ದಲಿತ ಸಮುದಾಯದ ಯುವಕ ವಿಶಾಲ್ ಚಾವ್ಡಾಗೆ ಅತ್ಯಂತ ಸಂತೋಷದ ದಿನವಾಗಬೇಕಿದ್ದ ಮದುವೆಯ ದಿನವು ಹಲ್ಲೆ ಮತ್ತು ನಿಂದನೆಗಳ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಸೋಮವಾರ (ಫೆಬ್ರವರಿ 2) ವಿಶಾಲ್ ಚಂದ್ರುಮಣ ಗ್ರಾಮದ ಬೀದಿಗಳಲ್ಲಿ ತನ್ನ ಮದುವೆ ಮೆರವಣಿಗೆಗಾಗಿ ಕುದುರೆ ಏರಿದ್ದರು. ಮದುವೆಯ ಸಂಭ್ರಮಕ್ಕೆ ಸಂಗೀತ ಮೆರುಗು ನೀಡಲಾಗಿತ್ತು. ಈ ವೇಳೆ ಕತ್ತಿಗಳ ಶಬ್ಧದಿಂದ ಹಠಾತ್ತನೆ ಮೌನವಾಯಿತು.

ಪ್ರಬಲ ಸಮುದಾಯದ ಪುರುಷರ ಗುಂಪೊಂದು ಮೆರವಣಿಗೆಯನ್ನು ತಡೆದರು. ಕೆಳಜಾತಿಯ ವರನೊಬ್ಬ ತಮ್ಮ ವಿಶೇಷ ಸವಲತ್ತು ಎಂದು ಪರಿಗಣಿಸುವ ಕುದುರೆ ಸವಾರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಧೈರ್ಯ ಮಾಡಿದ್ದರಿಂದ ದುಷ್ಕರ್ಮಿಗಳು ಆಕ್ರೋಶಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇಲ್ಲಿದೆ ವಿಡಿಯೊ:



ಈ ಗ್ರಾಮದಲ್ಲಿ ಒಬ್ಬ ದಲಿತನಿಗೆ ಕುದುರೆ ಸವಾರಿ ಮಾಡಲು ಎಷ್ಟು ಧೈರ್ಯ? ಎಂದು ಪರಿಸ್ಥಿತಿ ಹಿಂಸಾತ್ಮಕವಾಗುವ ಮೊದಲು ದಾಳಿಕೋರರು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕತ್ತಿಗಳನ್ನು ಹಿಡಿದುಕೊಂಡು ಬಂದ ಗುಂಪು ಗೂಂಡಾಗಿರಿ ಮಾಡಿದೆ. ವರನಿಗೆ ಹಾಗೂ ಆತನ ಸಂಬಂಧಿಕರಿಗೆ ಬೆದರಿಕೆ ಹಾಕಿದೆ. ಅಷ್ಟೇ ಅಲ್ಲದೆ ದೈಹಿಕವಾಗಿಯೂ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ.

ಮದುವೆ ರಿಸೆಪ್ಷನ್‌ಗೆ ತೆರಳುತ್ತಿದ್ದ ವರನಿಗೆ ಚೂರಿಯಿಂದ ಇರಿತ; ವಧುವಿನ ಹಳೆ ಲವರ್‌ ಕೃತ್ಯ?

ಇಂತಹ ಘಟನೆಯು ಇದೇ ಮೊದಲ ಬಾರಿಗೆ ನಡೆದಿದ್ದಲ್ಲ. ಗುಜರಾತ್‌ನಲ್ಲಿ ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿರುವುದು ಕಳವಳಕಾರಿ ಎಂದು ನೆಟ್ಟಿಗರು ತಿಳಿಸಿದ್ದಾರೆ. ಗಾಂಧಿನಗರದಿಂದ ಬನಸ್ಕಾಂತದವರೆಗೆ ದಲಿತ ವರನೊಬ್ಬ ಕುದುರೆ ಸವಾರಿ ಮಾಡಿರುವುದು ಹಿಂಸೆಗೆ ತಿರುಗಿದೆ. ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಹೊರತಾಗಿಯೂ, ಪ್ರಬಲ ಸಮುದಾಯಗಳು ದಲಿತ ಸಮುದಾಯಗಳಿಗೆ ಕುದುರೆ ಸವಾರಿ ನಿಷೇಧಿಸಿವೆ.

ಈ ಸಂಬಂಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ಕಾನೂನು-ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ನಿಯೋಜಿಸಿದ್ದಾರೆ. ಆದರೂ ಮಾನಸಿಕ ಗಾಯಗಳು ಇನ್ನೂ ಆಳವಾಗಿ ಉಳಿದಿವೆ ಎಂದು ವಿಶಾಲ್ ಮತ್ತು ಅವರ ಕುಟುಂಬಸ್ಥರು ತಿಳಿಸಿದ್ದಾರೆ. 2024ರ ಫೆಬ್ರವರಿಯಲ್ಲಿ ಗಾಂಧಿನಗರದ ಚಡಸಾನ ಗ್ರಾಮದಲ್ಲಿ ದಲಿತ ವರ ವಿಕಾಸ್ ಚಾವ್ಡಾ ಅವರನ್ನು ನಾಲ್ವರು ಪುರುಷರು ಕುದುರೆಯಿಂದ ಎಳೆದು ಕಪಾಳಮೋಕ್ಷ ಮಾಡಿದ್ದರು. 2020ರಲ್ಲಿ ವರನೊಬ್ಬ ತನ್ನ ಮದುವೆ ಮೆರವಣಿಗೆಗೆ ಕುದುರೆ ಸವಾರಿಯಲ್ಲಿ ಬಂದಿದ್ದಕ್ಕೆ ಕಲ್ಲು ತೂರಾಟ ನಡೆಸಲಾಗಿತ್ತು.