ನವದೆಹಲಿ: ದೆಹಲಿ (Delhi) ಮುಖ್ಯಮಂತ್ರಿ ರೇಖಾ ಗುಪ್ತಾ (Rekha Gupta) ಅವರ ಮೇಲೆ ದಾಳಿ ನಡೆಸಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಶಾಲಿಮಾರ್ ಬಾಗ್‌ನ (Shalimar Bagh) ಅವರ ನಿವಾಸದ ಸಿಸಿಟಿವಿ ದೃಶ್ಯಾವಳಿಯು ಆರೋಪಿ ರಾಜೇಶ್ ಭಾಯ್ ಖಿಮ್ಜಿ ಸಕಾರಿಯಾ ಘಟನೆಗೆ ಕನಿಷ್ಠ 24 ಗಂಟೆಗಳ ಮೊದಲು ಮುಖ್ಯಮಂತ್ರಿಯ ನಿವಾಸದ ಸುತ್ತಮುತ್ತಲು ಓಡಾಡುತಿರುವುದನ್ನು ತೋರಿಸಿದೆ. ಇದು ದಾಳಿಯು ಪೂರ್ವ ಯೋಜಿತವಾಗಿತ್ತು ಎಂಬುದಕ್ಕೆ ಸಾಕ್ಷಿ. 41 ವರ್ಷದ ರಾಜೇಶ್ ಸಕಾರಿಯಾ ಬುಧವಾರ ಜನ ಸುನ್‌ವಾಯೀಯ ಸಂದರ್ಭದಲ್ಲಿ ರೇಖಾ ಗುಪ್ತಾ ಅವರ ಮೇಲೆ ದಾಳಿ ನಡೆಸಿದ್ದಾನೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯು ನಿವಾಸದ ಸುತ್ತಲೂ ಸಂಚರಿಸಿ, ವಿಡಿಯೊ ಚಿತ್ರೀಕರಿಸುತ್ತಿರುವುದು ಕಂಡುಬಂದಿದೆ. ಇದು ದಾಳಿಗೆ ಪೂರ್ವಯೋಜಿತ ತಯಾರಿಯನ್ನು ಸೂಚಿಸುತ್ತದೆ. ಪೊಲೀಸರು ಈ ದೃಶ್ಯಾವಳಿಯನ್ನು ಸಾಕ್ಷಿಯಾಗಿ ದಾಖಲಿಸಿಕೊಂಡು ವಿವರವಾದ ತನಿಖೆ ಆರಂಭಿಸಿದ್ದಾರೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಮಾತನಾಡಿ, “ಮುಖ್ಯಮಂತ್ರಿಗೆ ಕಪಾಳಮೋಕ್ಷ ಮಾಡಲಾಗಿದೆ ಎಂಬ ವರದಿಗಳು ಸುಳ್ಳು. ಜನ ಸುನ್‌ವಾಯೀಯ ಸಂದರ್ಭದಲ್ಲಿ ಆರೋಪಿಯು ರೇಖಾ ಗುಪ್ತಾ ಅವರ ಕೈಯನ್ನು ಎಳೆಯಲು ಯತ್ನಿಸಿದಾಗ ಗಲಾಟೆ ಉಂಟಾಯಿತು. ಈ ವೇಳೆ ಸಿಎಂ ತಲೆಗೆ ಪೆಟ್ಟಾಗಿರಬಹುದು” ಎಂದು ಸ್ಪಷ್ಟಪಡಿಸಿದ್ದಾರೆ. ಕಲ್ಲು ಎಸೆಯಲಾಗಿದೆ ಅಥವಾ ಹಲ್ಲೆ ಮಾಡಲಾಗಿದೆ ಎಂಬ ಊಹಾಪೋಹಗಳನ್ನು ಅವರು ತಳ್ಳಿಹಾಕಿದ್ದಾರೆ.
ಈ ಸುದ್ದಿಯನ್ನು ಓದಿ: Rahul Gandhi: ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿಗೆ ಶುಭಕೋರಿದ ರಾಹುಲ್ ಗಾಂಧಿ: ಕಾರಣ ಏನು?
ಆರೋಪಿಯ ಹಿನ್ನೆಲೆ
ರಾಜ್‌ಕೋಟ್ ನಿವಾಸಿ ರಾಜೇಶ್ ಸಕಾರಿಯಾನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಸಂಬಂಧಿಯೊಬ್ಬರು ಜೈಲಿನಲ್ಲಿದ್ದಾರೆ ಮತ್ತು ಆತ ಆ ಸಂಬಂಧಿಯ ಬಿಡುಗಡೆಗೆ ಸಂಬಂಧಿಸಿದ ಅರ್ಜಿಯೊಂದಿಗೆ ದೆಹಲಿಗೆ ಬಂದಿದ್ದ ಎಂದು ಮೂಲಗಳು ತಿಳಿಸಿವೆ. ರಾಜ್‌ಕೋಟ್ ಪೊಲೀಸರು ಆತನ ತಾಯಿಯನ್ನು ವಿಚಾರಿಸಿದಾಗ, ಆಕೆ ತನ್ನ ಮಗನು ದೆಹಲಿಗೆ ತೆರಳಿರುವ ಬಗ್ಗೆ ತನಗೆ ಗೊತ್ತಿರಲಿಲ್ಲ ಎಂದಿದ್ದಾರೆ. ರಾಜೇಶ್‌ನನ್ನು ಮಾನಸಿಕವಾಗಿ ಅಸ್ಥಿರನೆಂದು ಹೇಳಿದ ತಾಯಿ, ಅವನು ಪ್ರಾಣಿಪ್ರಿಯ ಮತ್ತು ಶ್ವಾನಗಳಿಗೆ ಸಂಬಂಧಿಸಿದ ತೀರ್ಪಿನ ಬಗ್ಗೆ ದೆಹಲಿಗೆ ತೆರಳಿದ್ದ ಎಂದು ಹೇಳಿದ್ದಾರೆ. ರಾಜೇಶ್ ರಿಕ್ಷಾ ಚಾಲಕರ ಕುಟುಂಬದಿಂದ ಬಂದವನು.
ರಾಜೇಶ್ ಸಕಾರಿಯಾ ಈಗ ಪೊಲೀಸ್ ವಶದಲ್ಲಿದ್ದು, ಆತನ ಉದ್ದೇಶವನ್ನು ತಿಳಿಯಲು ವಿವರವಾದ ವಿಚಾರಣೆ ನಡೆಯಲಿದೆ. ಆತನ ಗುರುತು ಮತ್ತು ವಿಳಾಸವನ್ನು ದೃಢೀಕರಿಸಲು ದೆಹಲಿ ಪೊಲೀಸರು ಗುಜರಾತ್ ಪೊಲೀಸರ ಸಂಪರ್ಕದಲ್ಲಿದ್ದಾರೆ.