ನವದೆಹಲಿ, ಸೆ. 27: ದೆಹಲಿ ಸಚಿವ ಪರ್ವೇಶ್ ವರ್ಮಾ (Parvesh Verma) ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಚಿವ ಪರ್ವೇಶ್ ವರ್ಮಾ ತಿಲಕ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಪರಿಶೀಲನೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ. ಸಚಿವರಿಂದ ದಾಳಿಗೊಳಗಾಗಿದ್ದಾರೆ ಎನ್ನಲಾದ ವ್ಯಕ್ತಿ ನಂತರ ಸಚಿವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಮಾತನಾಡಿ, ಸಚಿವ ಪರ್ವೇಶ್ ವರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಸೋಮವಾರ (ಸೆಪ್ಟೆಂಬರ್ 28) ತಾವು ಈ ಪ್ರದೇಶಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಅರವಿಂದ ಕೇಜ್ರಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸಚಿವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
“ರಸ್ತೆ ನಿರ್ಮಾಣದಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಕ್ಕಾಗಿ ಮೋದಿ ಅವರ ಸಚಿವರೊಬ್ಬರು ಯುವಕನೊಬ್ಬನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ್ದಾರೆ. ನಾನು ನಾಳೆ ತಿಲಕ್ ನಗರಕ್ಕೆ ಹೋಗಿ ಈ ರಸ್ತೆಯನ್ನು ಪರಿಶೀಲಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇಲ್ಲಿದೆ ವಿಡಿಯೊ:
“ಮೋದಿ ಸರ್ಕಾರವು ಜೆನ್-ಝೀ ಜನತೆಯನ್ನು ತಲುಪಲು ಬಯಸುತ್ತಿದೆ. ಆದರೆ, ತಳಮಟ್ಟದಲ್ಲಿ ಆ ತಲುಪುವಿಕೆ ಹೇಗಿದೆ ಎಂಬುದನ್ನು ನೋಡಿ. ಪ್ರಶ್ನೆಗಳನ್ನು ಕೇಳಿದ ಜೆನ್-ಝೀ ಯುವಕನಿಗೆ ದೆಹಲಿ ಸಚಿವ ಪರ್ವೇಶ್ ವರ್ಮಾ ಕಪಾಳಮೋಕ್ಷ ಮಾಡಿದ್ದಾರೆ” ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
“2016ರಲ್ಲಿ ಬಿಜೆಪಿ ಟಿಕೆಟ್ ನೀಡಲು ಜ್ಞಾನೇಶ್ ಕುಮಾರ್ ಮುಂದಾಗಿದ್ದರು”: ಕೇರಳಂ ಮಾಜಿ ಮುಖ್ಯ ಕಾರ್ಯದರ್ಶಿ
ರಸ್ತೆ ನಿರ್ಮಾಣದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾಗ ಕೋಪಗೊಂಡು ಆ ವ್ಯಕ್ತಿಗೆ ಸಚಿವ ವರ್ಮಾ ಕಪಾಳಮೋಕ್ಷ ಮಾಡಿದ್ದಾರೆ ಎಂದು ತಿಲಕ್ ನಗರದ ಎಎಪಿ ಶಾಸಕ ಜರ್ನೈಲ್ ಸಿಂಗ್ ಆರೋಪಿಸಿದ್ದಾರೆ. ವರ್ಮಾ ರಸ್ತೆ ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದ್ದರು. ಕಾಮಗಾರಿಯ ಬಗ್ಗೆ ಪ್ರಶ್ನೆಗಳು ಎದ್ದ ನಂತರ ಸಚಿವರು ಈ ರೀತಿ ಪ್ರತಿಕ್ರಿಯಿಸಿದರು ಎಂದು ಸಿಂಗ್ ಹೇಳಿದ್ದಾರೆ.
ದೆಹಲಿ ಎಎಪಿ ಮುಖ್ಯಸ್ಥ ಸೌರಭ್ ಭಾರದ್ವಾಜ್ ಈ ಘಟನೆಯನ್ನು ಅವಮಾನಕರ ಮತ್ತು ಹೇಡಿತನದ ನಡೆ ಎಂದು ಬಣ್ಣಿಸಿದ್ದಾರೆ. ಕೃತ್ಯವನ್ನು ನಾಚಿಕೆಗೇಡು ಎಂದು ಕರೆದಿದ್ದಾರೆ. ಈ ಘಟನೆಯನ್ನು ವಿಡಿಯೊ ಮಾಡುತ್ತಿದ್ದ ಯುವಕನು, ತಾನು ತಿಲಕ್ ನಗರ ಕ್ಷೇತ್ರದ ಆಮ್ ಆದ್ಮಿ ಪಕ್ಷದ (AAP) ಶಾಸಕನ ಸಾಮಾಜಿಕ ಜಾಲತಾಣದ ಚಟುವಟಿಕೆಗಳನ್ನು ನಿರ್ವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಘಟನೆ ನಡೆದ ಬಳಿಕ ಪರ್ವೇಶ್ ವರ್ಮಾ ಅವರ ಸಹಚರರು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಘಟನೆಯ ಕುರಿತು ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ, ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊ ಹೇಳಿಕೆಯೊಂದನ್ನು ಹಂಚಿಕೊಂಡಿದ್ದಾರೆ. “ಇಂದಿನ ಘಟನೆಯ ಹಿಂದಿರುವ ಸಂಪೂರ್ಣ ಸತ್ಯವನ್ನು ಕೇಳಿ. ಆದರೆ ಇದು ನಡೆಯಬಾರದಿತ್ತು” ಎಂದು ಬರೆದಿದ್ದಾರೆ.