ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ಹಾಸ್ಯ ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ಅವರು ಸಿರಿಯನ್ ಅಧ್ಯಕ್ಷರಿಗೆ (Syrian President al-Sharaa) ಎಷ್ಟು ಹೆಂಡತಿಯರು ಎಂದು ಕೇಳಿದ ವಿಡಿಯೊವೊಂದು ವೈರಲ್ ಆಗಿದೆ. ಶ್ವೇತಭವನದಲ್ಲಿ ಸಿರಿಯನ್ ಅಧ್ಯಕ್ಷ ಅಲ್ ಶರಾ ಅವರಿಗೆ ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿಮಗೆ ಎಷ್ಟು ಹೆಂಡತಿಯರು ಎಂದು ತಮಾಷೆಯಾಗಿ ಕೇಳಿದ್ದಾರೆ. ಇದು ಅಲ್ಲಿದ್ದವರೆಲ್ಲ ನಗುವಂತೆ ಮಾಡಿತ್ತು.
ಸಿರಿಯನ್ ಅಧ್ಯಕ್ಷ, ಅಲ್-ಖೈದಾದ ಮಾಜಿ ಕಮಾಂಡರ್ ಅಲ್ ಶರಾ ಅವರು ಸಿರಿಯಾವನ್ನು ಪುನರ್ ನಿರ್ಮಿಸುವ ಮತ್ತು ಯುಎಸ್ ನಿರ್ಬಂಧಗಳನ್ನು ಸ್ಥಗಿತಗೊಳಿಸುವ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದರು.
ಇದನ್ನೂ ಓದಿ: Bihar Election ground report by Raghav Sharma Nidle: ಬಿಹಾರ ಸಮರಕಣದಲ್ಲಿ ನಾನು ಕಂಡದ್ದು...ಕೇಳಿದ್ದು
ಈ ವೇಳೆ ಅಹ್ಮದ್ ಅಲ್ ಶರಾ ಅವರಿಗೆ ಸುಗಂಧ ದ್ರವ್ಯದ ಬಾಟಲಿಯನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ಅವರು ತಮಾಷೆಯಾಗಿ ಅವರ ಹೆಂಡತಿಯರ ಸಂಖ್ಯೆಯ ಬಗ್ಗೆ ಕೇಳಿದರು.
ಸಿರಿಯಾವು 1946ರಲ್ಲಿ ಸ್ವಾತಂತ್ರ್ಯ ಪಡೆದಿದ್ದು, ಇದರ ಬಳಿಕ ಸಿರಿಯನ್ ನಾಯಕರೊಬ್ಬರು ಇದೇ ಮೊದಲ ಬಾರಿಗೆ ವಾಷಿಂಗ್ಟನ್‌ಗೆ ಭೇಟಿ ನೀಡಿದರು.
ಅಲ್ ಶರಾ ಅವರಿಗೆ ಸುಗಂಧ ದ್ರವ್ಯವನ್ನು ಸಿಂಪಡಿಸಿದ ಟ್ರಂಪ್ ಅವರು, ಇದು ಅತ್ಯುತ್ತಮ ಸುಗಂಧ ದ್ರವ್ಯ. ಇನ್ನೊಂದು ಬಾಟಲ್ ನಿಮ್ಮ ಹೆಂಡತಿಗೆ. ಅಂದಹಾಗೆ ನಿಮಗೆ ಎಷ್ಟು ಹೆಂಡತಿಯರು? ಎಂದು ಕೇಳಿದ್ದಾರೆ. ಆಶ್ಚರ್ಯಚಕಿತರಾದ ಅಲ್-ಶರಾ, ಒಬ್ಬಳು ಎಂದು ತಕ್ಷಣ ಪ್ರತಿಕ್ರಿಯಿಸಿದರು. ಇದು ಅಲ್ಲಿದ್ದವರೆಲ್ಲ ನಗುವಂತೆ ಮಾಡಿತು. ಆಗ ಟ್ರಂಪ್ ನಮಗೆ ಗೊತ್ತಿಲ್ಲ ಎಂದು ಹೇಳಿದರು.
ಸಿರಿಯನ್ ಅಧ್ಯಕ್ಷ ಅಲ್ ಶರಾ ಅವರು ಕಳೆದ ಡಿಸೆಂಬರ್‌ನಲ್ಲಿ ಮಾಜಿ ಅಲ್-ಖೈದಾದ ಕಮಾಂಡರ್ ಆಗಿ ನೇಮಕಗೊಂಡಿದ್ದಾರೆ. ಇವರು ದೀರ್ಘಕಾಲದ ಸಿರಿಯನ್ ಆಡಳಿತಗಾರ ಬಶರ್ ಅಲ್-ಅಸ್ಸಾದ್ ಅವರನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದಿದ್ದಾರೆ.
ಯುಎಸ್ ಖಜಾನೆ ಇಲಾಖೆ ಡಮಾಸ್ಕಸ್ ಮೇಲಿನ ನಿರ್ಬಂಧಗಳನ್ನು ಆರು ತಿಂಗಳ ಕಾಲ ಅಮಾನತುಗೊಳಿಸುವುದಾಗಿ ಘೋಷಿಸಿದ ಬಳಿಕ ಸಿರಿಯನ್ ಅಧ್ಯಕ್ಷರು ಅಮೆರಿಕಕ್ಕೆ ಭೇಟಿ ನೀಡಿ ರಾಷ್ಟ್ರಾಧ್ಯಕ್ಷರೊಂದಿಗೆ ಸಭೆ ನಡೆಸಿದರು.
ಸಿರಿಯನ್ ಅಧ್ಯಕ್ಷರೊಂದಿಗಿನ ಮಾತುಕತೆಯ ಬಳಿಕ ಟ್ರಂಪ್, ಅವರನ್ನು ಹೊಗಳಿದರು. ಅವರು ತುಂಬಾ ಕಠಿಣ ಸ್ಥಳದಿಂದ ಬಂದವರು. ನನಗೆ ಅವರು ಇಷ್ಟ. ಸಿರಿಯಾವನ್ನು ಯಶಸ್ವಿಗೊಳಿಸಲು ನಾವು ನಮ್ಮ ಕೈಲಾದಷ್ಟು ಮಾಡುತ್ತೇವೆ. ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿ ಇದೆ ಎಂದು ಹೇಳಿದರು.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಯನತಾರಾ ದಂಪತಿ, ಸರ್ಪಸಂಸ್ಕಾರದಲ್ಲಿ ಭಾಗಿ
ನಾವೆಲ್ಲರೂ ಕಠಿಣ ಭೂತಕಾಲವನ್ನು ಹೊಂದಿದ್ದೇವೆ. ಇದರ ಬಗ್ಗೆ ಸಿರಿಯನ್ ಅಧ್ಯಕ್ಷರೊಂದಿಗೆ ಚರ್ಚಿಸಲಾಗಿಲ್ಲ ಎಂದು ತಿಳಿಸಿದರು.
ಅಮೆರಿಕ ಭೇಟಿ ನೀಡಿದ ಅಲ್-ಶರಾ ಅವರು ಟ್ರಂಪ್ ಅವರೊಂದಿಗೆ ಸಭೆ ನಡೆಸುವ ಮೊದಲು ಸದನದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾದ ಕಾಂಗ್ರೆಸ್ಸಿಗ ಬ್ರಿಯಾನ್ ಮಾಸ್ಟ್ ಅವರನ್ನು ಭೇಟಿ ಮಾಡಿದರು.