ಲಖನೌ: ಕುಡಿದ ಮತ್ತಿನಲ್ಲಿ ಹಾವಾಡಿಗನೊಬ್ಬ ಮಹಿಳಾ ಪೊಲೀಸ್ ಪೇದೆ ಮೇಲೆ ಸರ್ಪ ಎಸೆದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕಂಠಪೂರ್ತಿ ಕುಡಿದಿದ್ದ ಹಾವಾಡಿಗ ರಸ್ತೆಯಲ್ಲಿ ಗಲಾಟೆ ಮಾಡಿದ್ದಾನೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Viral Video) ಹರಿದಾಡುತ್ತಿದೆ. ಕೈಯಲ್ಲಿ ಹಾವು ಹಿಡಿದುಕೊಂಡು ಆ ವ್ಯಕ್ತಿ ದಾರಿಹೋಕರ ಬಳಿಗೆ ಹೋಗಿ ಹತ್ತಿರದ ಅಂಗಡಿಗಳಿಗೆ ನುಗ್ಗಲು ಯತ್ನಿಸಿದ್ದಾನೆ. ಅಂಗಡಿಗಳ ಒಳಗೆ ಚಹಾ ಕುಡಿಯುತ್ತಿದ್ದವರು ಕೈಯಲ್ಲಿ ಹಾವು ಇರುವುದನ್ನು ಗಮನಿಸಿ ಭಯಭೀತರಾಗಿ ಎದ್ದು ಓಡಿಹೋಗಿದ್ದಾರೆ.
ಈ ದೃಶ್ಯಾವಳಿಯಲ್ಲಿ ಹಾವಾಡಿಗನೊಬ್ಬ ಚಹಾ ಅಂಗಡಿಯೊಳಗೆ ವ್ಯಕ್ತಿಯೊಬ್ಬರ ಕುತ್ತಿಗೆಗೆ ಹಾವನ್ನು ಇಡುತ್ತಿರುವುದನ್ನು ತೋರಿಸಲಾಗಿದ್ದು, ಇದು ಅಲ್ಲಿದ್ದವರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತು. ಅಂಗಡಿಯವರು ಮತ್ತು ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದಾಗ ಹಾವಾಡಿಗ ಹೊರ ಬಂದಿದ್ದಾನೆ.
ವಿಡಿಯೊ ಇಲ್ಲಿದೆ:
ಕೆಲವು ಕ್ಷಣಗಳ ನಂತರ ಅವನು ಮಹಿಳಾ ಕಾನ್‌ಸ್ಟೇಬಲ್ ಕಡೆಗೆ ಹಾವನ್ನು ಎಸೆದಿದ್ದಾನೆ. ಭಯಭೀತರಾದ ಪೊಲೀಸ್ ಪೇದೆ ಕಿರುಚುತ್ತಾ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಹಾವನ್ನು ಮತ್ತೊಬ್ಬ ಪೊಲೀಸ್ ಅಧಿಕಾರಿಯ ಕಡೆಗೆ ಎಸೆಯಲು ಮುಂದಾಗಿದ್ದಾನೆ. ಕೂಡಲೇ ಪೊಲೀಸ್ ತನ್ನ ಮೋಟಾರ್‌ಬೈಕಿನಿಂದ ಇಳಿದು ಸ್ಥಳದಿಂದ ಓಡಿದ್ದಾರೆ.
ವರದಿ ಪ್ರಕಾರ, ಹಾವಾಡಿಗನ ವರ್ತನೆಗಳನ್ನು ನೋಡಿದ ನಂತರ, ಅಂಗಡಿಯವರು ತಮ್ಮ ಅಂಗಡಿಗಳಿಂದ ಹೊರಬಂದು ಅವನನ್ನು ಸುತ್ತುವರಿದರು. ಇದನ್ನು ಅರಿತುಕೊಂಡ ಹಾವಾಡಿಗ ಸದ್ದಿಲ್ಲದೆ ಹಾವನ್ನು ಎತ್ತಿಕೊಂಡು, ಅದನ್ನು ಮತ್ತೆ ಬುಟ್ಟಿಯಲ್ಲಿ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.