ಗಾಂಧಿನಗರ, ಜು. 21: ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಸಮಾಜದಲ್ಲಿ ಶೋಷಣೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಈ ಆಧುನಿಕ ಯುಗದಲ್ಲಿ ಮಾನವನನ್ನು ಮಾನವನೇ ಹೊರುವ ಪದ್ಧತಿಯನ್ನು ಸಮಾಜ ನಿಜಕ್ಕೂ ಒಪ್ಪುತ್ತಾ? ಇಂತಹದೊಂದು ಗಂಭೀರ ಚರ್ಚೆಗೆ ಕಾರಣವಾಗುವ ವಿಡಿಯೊ ಭಾರಿ ವೈರಲ್ (Viral Video) ಆಗುತ್ತಿದೆ. ಇದು ಭಕ್ತಿಯೇ ಅಥವಾ ಮಾನವ ಶೋಷಣೆಯೇ ಎಂದು ಪ್ರಶ್ನೆಯೂ ಮೂಡಿದೆ. ಗುಜರಾತ್‌ನ ಜುನಾಗಢದ ತೀರ್ಥಯಾತ್ರೆಯ ಸಂದರ್ಭದಲ್ಲಿ ಭಕ್ತನೊಬ್ಬನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಲ್ವರು ಕಾರ್ಮಿಕರು ದುರ್ಗಮ ಹಾದಿಯಲ್ಲಿ ಸಾಗಿದ್ದಾರೆ. 21ನೇ ಶತಮಾನದಲ್ಲೂ ಇಂತಹ ಪದ್ಧತಿ ಜಾರಿಯಲ್ಲಿದ್ಯಾ ಎನ್ನುವ ಪ್ರಶ್ನೆ ಮೂಡುವಂತಾಗಿದೆ.
ವೈರಲ್ ವಿಡಿಯೊದಲ್ಲಿ ತಾತ್ಕಾಲಿಕ ಪಲ್ಲಕ್ಕಿಯ ಮೇಲೆ ಕುಳಿತಿರುವ ಭಕ್ತನನ್ನು ನಾಲ್ವರು ಬೆಟ್ಟದ ತುದಿಯಿಂದ ದೇವಾಲಯದ ಕಡೆಗೆ ಹೋಗುವ ಕಡಿದಾದ ಮೆಟ್ಟಿಲುಗಳ ಮೇಲೆ ಹೊತ್ತುಕೊಂಡು ಸಾಗುತ್ತಿರುವುದು ಕಂಡು ಬಂದಿದೆ. ಕಿರಿದಾದ ಮೆಟ್ಟಿಲುಗಳ ಮೇಲೆ ಆತನ ತೂಕವನ್ನು ಸಮತೋಲನಗೊಳಿಸುತ್ತ ಸಾಗುವ ವಿಡಿಯೊ ನೋಡುಗರ ಮನಸ್ಸನ್ನು ಕರಗಿಸಿದೆ. ಧಾರ್ಮಿಕ ಹೆಸರಿನಲ್ಲಿ ಇತರರನ್ನು ದುಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ.
ವಿಡಿಯೊ ನೋಡಿ:
"ಇದನ್ನು ನೋಡಿ ದೇವರು ನಿಜಕ್ಕೂ ಸಂತೋಷಪಡುತ್ತಾನೆಯೇ?" ಎಂದು ಬರೆದು ಈ ವಿಡಿಯೊ ಶೇರ್ ಮಾಡಲಾಗಿದೆ. ಕೆಲವರು ದಯವಿಟ್ಟು ಇದು ನಾಲ್ಕು ಜನರಿಗೆ ಉದ್ಯೋಗ ನೀಡುತ್ತಿದೆ ಎಂದು ಹೇಳುವ ಮೂಲಕ ಸಮರ್ಥಿಸಬೇಡಿ ಎಂದು ಕಮೆಂಟ್ ಮಾಡಿದ್ದಾರೆ. ವಯೋಸಹಜ ಕಾಯಿಲೆ, ಇತರ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ನಡೆಯಲು ಸಾಧ್ಯವಾಗದವರಿಗೆ ಇಂತಹ ಸೇವೆಗಳು ಅನಿವಾರ್ಯ. ಆದರೆ ಇದು ನಂಬಿಕೆಯಾಗಿ ಉಳಿದರೆ ತಪ್ಪು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ರಸ್ತೆಗೆ ಮದ್ಯದ ಬಾಟಲ್ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ
ಈ ವಿಡಿಯೊ ತ್ವರಿತವಾಗಿ ವೈರಲ್ ಆಗಿದೆ. ಒಬ್ಬರು, ʼʼವ್ಯಕ್ತಿಯನ್ನು ಹೊತ್ತುಕೊಂಡು ಬದುಕು ಸಾಗಿಸುವುದು ನಿಜಕ್ಕೂ ಬೇಸರದ ಸಂಗತಿʼʼ ಎಂದಿದ್ದಾರೆ. ಮತ್ತೊಬ್ಬರು, ʼʼಧಾರ್ಮಿಕ ತೀರ್ಥಯಾತ್ರೆಗಳ ಸಮಯದಲ್ಲಿ ಒಬ್ಬ ವ್ಯಕ್ತಿಯನ್ನು ಇತರರು ಹೊತ್ತೊಯ್ಯುವುದು ನೈತಿಕವಾಗಿ ಸ್ವೀಕಾರಾರ್ಹವೇ?ʼʼ ಎಂದು ಕೇಳಿದ್ದಾರೆ.