ಉತ್ತರ ಪ್ರದೇಶ,ಡಿ.31: ಹೆಚ್ಚಿನವರಿಗೆ ನಾಯಿ, ಬೆಕ್ಕು ಸೇರಿದಂತೆ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ಎಂದರೆ ಬಹಳಷ್ಟು ಅಚ್ಚುಮೆಚ್ಚು..ಜನರು ಇಂದು ತಮ್ಮ ಕುಟುಂಬದ ಸದಸ್ಯರಂತೆ ಸಾಕುಪ್ರಾಣಿಗಳನ್ನು ಸಾಕುತ್ತಾರೆ. ಸದ್ಯ ಇಂತಹ ಪ್ರಾಣಿಗಳ ಮೇಲಿನ ಪ್ರೀತಿ ಎಂತಹದ್ದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಯುಪಿಯ ಡಿಯೋರಿಯಾದಲ್ಲಿರುವ ಒಂದು ಕುಟುಂಬವು ನಾಪತ್ತೆ ಯಾಗಿರುವ ಮುದ್ದಿನ ಬೆಕ್ಕನ್ನು ಪತ್ತೆಹಚ್ಚಲು ಪೊಲೀಸ್ ದೂರು ನೀಡುವುದರ ಜೊತೆಗೆ, ಬರೋಬ್ಬರಿ 10,000 ರೂಪಾಯಿ ನಗದು ಬಹುಮಾನವನ್ನು ಕೂಡ ಘೋಷಣೆ ಮಾಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಹೂರ್ ಎಂಬ ಹೆಸರಿನ ಬೆಕ್ಕು ಡಿಸೆಂಬರ್ 21 ರಂದು ಡಿಯೋರಿಯಾದ ನ್ಯೂ ಕಾಲೋನಿ ಮನೆ ಯಲ್ಲಿದ್ದ ಬೆಕ್ಕು ಕಾಣೆಯಾಗಿದೆ. ಇದು ಪರ್ಷಿಯನ್ ಮತ್ತು ಇಂಡಿಯನ್ ತಳಿಯ ಮಿಶ್ರಣದ ಬಿಳಿ ಬಣ್ಣದ ಬೆಕ್ಕಾಗಿದ್ದು, ಮನೆಯ ಬಾಗಿಲು ತೆರೆದ ಸಂದರ್ಭದಲ್ಲಿ ಆಚೆ ಹೋಗಿದೆ ಎಂದು ತಿಳಿದು ಬಂದಿದೆ. ಸದ್ಯ ತಮ್ಮ ಕಾಣೆಯಾದ ಸಾಕು ಬೆಕ್ಕನ್ನು ಪತ್ತೆಹಚ್ಚಲು ರೂ. 10,000 ಬಹುಮಾನವನ್ನು ಈ ಕುಟುಂಬ ಘೋಷಣೆ ಮಾಡಿದೆ. ಯೂಸುಫ್ ಅವರ ಪುತ್ರಿ ಇಮಾನ್ ಈ ಬೆಕ್ಕನ್ನು 2022ರಲ್ಲಿ ದೆಹಲಿಯಿಂದ ತಂದಿದ್ದು ಅಂದಿನಿಂದ ಈ ಬೆಕ್ಕನ್ನು ಮನೆಯ ಸದಸ್ಯ ನಂತೆಯೇ ಸಾಕಲಾಗಿತ್ತು.
ಆದರೆ ಬೆಕ್ಕು ಎಲ್ಲೂ ಪತ್ತೆಯಾಗದಿದ್ದಾಗ, ಕುಟುಂಬದವರು ಡಿಸೆಂಬರ್ 29 ರಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ನಗರದಾದ್ಯಂತ ಬೆಕ್ಕಿನ ಪೋಸ್ಟರ್ ಗಳನ್ನು ಹಚ್ಚಲಾಗಿದೆ. ಅಲ್ಲದೆ, ಪ್ರತಿದಿನ ಬೀದಿಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೂ ಇದರ ಬಗ್ಗೆ ಮಾಹಿತಿ ನೀಡಲಾಗಿದೆ. ಊರಿನ ಯಾರೇ ಆಗಿರಲಿ ಬೆಕ್ಕಿನ ಮಾಹಿತಿ ನೀಡಿದರೆ ಅವರಿಗೆ ಸ್ಥಳದಲ್ಲೇ 10,000 ರೂಪಾಯಿ ಬಹುಮಾನ ನೀಡುತ್ತೇವ ಎಂದು ಮಾಲೀಕರು ಭರವಸೆ ನೀಡಿದ್ದಾರೆ.
Viral Video: ತಂದೂರಿ ರೋಟಿಗಾಗಿ ರಣರಂಗವಾಯ್ತು ಮದುವೆ: ನೆಟ್ಟಿಗರಿಂದ ಭಾರಿ ಟೀಕೆ
ಕುಟುಂಬದ ಭಾವನೆಗಳನ್ನು ಗೌರವಿಸಿರುವ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೆಕ್ಕನ್ನು ಪತ್ತೆಹಚ್ಚಲು ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ ಈ 'ಹೂರ್' ಪತ್ತೆ ಕಾರ್ಯ ದ ಭಾರಿ ಸದ್ದು ಮಾಡುತ್ತಿದೆ. ಸದ್ಯ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಹೂರ್ ಬೇಗನೆ ಸಿಗುವಂತಾಗಲಿ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ಬೆಕ್ಕನ್ನು ಬಹಳ ಮುದ್ದಿನಿಂದ ಸಾಕಿದ್ದಾರೆ..ಕುಟುಂಬದ ಜೊತೆ ಅತೀ ಬೇಗನೆ ಸೇರುವಂತಾಗಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.