ನವದೆಹಲಿ, ಫೆ. 1: ತಂದೆ ಮತ್ತು ಮಗಳ ಬಾಂಧವ್ಯವನ್ನು ಬಣ್ಣಿಸಲು ಸಾಧ್ಯವಿಲ್ಲ. ತಂದೆಯ ಪ್ರೀತಿ ತೋರಿಕೆಯದ್ದಲ್ಲ. ಬದಲಿಗೆ ಮಗಳ ಖುಷಿಯನ್ನು, ಮೊಗದಲ್ಲಿ ನಗುವನ್ನು ನೋಡಲು ಬಯಸುವ ವ್ಯಕ್ತಿಯೇ ತಂದೆ. ಸದ್ಯ ತಂದೆಯ ಪ್ರೀತಿ ಎಂತಹುದು ಎನ್ನುವುದಕ್ಕೆ ಈ ಒಂದು ವಿಡಿಯೊ ಸಾಕ್ಷಿ. ಇದು ಕೋಟ್ಯಂತರ ಜನರ ಹೃದಯವನ್ನು ತಟ್ಟಿದೆ. ಗಣರಾಜ್ಯೋತ್ಸವ ದಿನ ತನ್ನ ಮಗಳ ನೃತ್ಯವನ್ನು ಕೀಪ್ಯಾಡ್ ಫೋನ್‌ನಲ್ಲಿ ರೆಕಾರ್ಡ್ ಮಾಡಲು ಯತ್ನಿಸುತ್ತಿರುವ ದೃಶ್ಯ ಇದಾಗಿದ್ದು ನೆಟ್ಟಿಗರ ಮನ ಗೆದ್ದಿದೆ. ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.
ತಂದೆ-ತಾಯಿಗೆ ತಮ್ಮ ಮಕ್ಕಳು ವೇದಿಕೆಯಲ್ಲಿ ಪ್ರದರ್ಶನ ನೀಡುವುದನ್ನು ನೋಡುವುದು ಒಂದು ಅಮೂಲ್ಯ ಕ್ಷಣ. ಇತ್ತೀಚೆಗೆ, ಒಬ್ಬ ವ್ಯಕ್ತಿಯ ವಿಡಿಯೊ ವೈರಲ್ ಆಗಿದ್ದು, ಅಲ್ಲಿ ಅವರು ಗಣ ರಾಜ್ಯೋತ್ಸವದ ದಿನ ಶಾಲಾ ಕಾರ್ಯಕ್ರಮವೊಂದರಲ್ಲಿ ತನ್ನ ಮಗಳ ನೃತ್ಯ ಪ್ರದರ್ಶನವನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುವುದನ್ನು ಕಾಣಬಹುದು.
ವಿಡಿಯೊ ನೋಡಿ:
ಮಗಳ ನೃತ್ಯ ಅರಂಭವಾದ್ದಂತೆ ಆಕೆಯ ತಂದೆ, ಮಕ್ಕಳ ಗುಂಪಿನ ನಡುವೆ ನಿಂತು ತನ್ನ ಹತ್ತಿರವಿದ್ದ ಕೀಪ್ಯಾಡ್ ಫೋನ್ ಅನ್ನು ಎತ್ತಿ ಹಿಡಿದು, ಮಗಳ ಪ್ರತಿಯೊಂದು ಹೆಜ್ಜೆಯನ್ನು ರೆಕಾರ್ಡ್ ಮಾಡಲು ಯತ್ನಿಸಿದ್ದಾರೆ. ತನ್ನ ಬಳಿ ದೊಡ್ಡ ಫೋನ್ ಇಲ್ಲದಿದ್ದರೂ ಮಗಳ ಪ್ರದರ್ಶನವನ್ನು ದಾಖಲಿಸಲು ಆ ವ್ಯಕ್ತಿ ಮಾಡಿದ ಪ್ರಯತ್ನವು ಅನೇಕರ ಗಮನ ಸೆಳೆಯಿತು. ಮಗಳ ಸಾಧನೆಯನ್ನು ಪ್ರತಿ ಕ್ಷಣ ಸಂಭ್ರಮಿಸುತ್ತಿದ್ದ ಆ ತಂದೆಯ ಮುಖದಲ್ಲಿದ್ದ ಹೆಮ್ಮೆ ಮತ್ತು ಕಾಳಜಿ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಕ್ಲಿಪ್ ಅನ್ನು ಜಿತೇಂದರ್ ಸರಸ್ವತ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿ ಕೊಂಡಿದ್ದಾರೆ. ಶಾಲಾ ಮಕ್ಕಳ ಗುಂಪಿನ ಈ ವಿಡಿಯೊ ನೋಡಿದ ನೆಟ್ಟಿಗರು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಕಪ್ಪೆ ಪತ್ತೆ; ಶಾಲೆ ವಿರುದ್ಧ ತನಿಖೆಗೆ ಆದೇಶ
ನೆಟ್ಟಿಗರು ʼʼಸೌಲಭ್ಯಗಳು ಮುಖ್ಯವಲ್ಲ, ಪ್ರೀತಿ ಮುಖ್ಯ ಎಂದಿದ್ದಾರೆ. ಮತ್ತೊಬ್ಬರು ನಿಮ್ಮಲ್ಲಿ ಏನಿದೆ ಅಥವಾ ಇಲ್ಲ ಎಂಬುದು ಮುಖ್ಯವಲ್ಲ, ನಿಮಗೆ ದೊಡ್ಡ ಹೃದಯವಿರಬೇಕು” ಎಂದು ಬರೆದಿದ್ದಾರೆ. ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಒಟ್ಟಿನಲ್ಲಿ, ಎಷ್ಟೇ ಆಧುನಿಕತೆ ಬಂದರೂ ತಂದೆ-ಮಗಳ ನಡುವಿನ ಈ ಬಾಂಧವ್ಯ ಎಲ್ಲವನ್ನೂ ಮೀರುವಂತದ್ದು ಎಂದು ಸಾಬೀತಾಗಿದೆ.