ಬೆಂಗಳೂರು, ಜು. 6: ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದೆ ಹಲವು ನೋವಿನ ಕಥೆ ಇರುತ್ತದೆ. ಕೆಲವರು ಹುಟ್ಟಿನಿಂದಲೇ ಶ್ರಿಮಂತರಾಗಿ ಇರುವುದಿಲ್ಲ, ಬಡತನದಿಂದ ಶ್ರಮಪಟ್ಟು ಸಾಧನೆ ಮಾಡಿದರವರು ಅನೇಕರಿದ್ದಾರೆ. ಇದೀಗ ಬೆಂಗಳೂರಿನ ಯುವಕನೊಬ್ಬ ಮೈಕ್ರೋಸಾಫ್ಟ್‌ನಲ್ಲಿ 1.9 ಕೋಟಿ ರುಪಾಯಿ ಸಂಬಳ ಪಡೆಯುತ್ತಿದ್ದು ಈ ಯಶಸ್ಸಿನ ಹಿಂದೆ ಅಡಗಿದ ನೋವಿನ ಘಟನೆಯೊಂದನ್ನು ಶೇರ್ (Viral News) ಮಾಡಿದ್ದಾನೆ. ತನ್ನ ಇಂದಿನ ಸಾಧನೆಗೆ ಬೆಂಬಲ ನೀಡಿದವರು ಪೋಷಕರು, ಅವರ ತ್ಯಾಗವನ್ನು ಮರೆಯುವಂತಿಲ್ಲ ಎಂದು ಈ ಘಟನೆಯನ್ನು ನೆನಪಿಸಿಕೊಂಡಿದ್ದಾನೆ.
ಪ್ರಸ್ತುತ ಬೆಂಗಳೂರಿನ ಮೈಕ್ರೋಸಾಫ್ಟ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅಗರವಾಲ್, ಕಾಲೇಜ್ ದಿನಗಳಲ್ಲಿ ಕುಟುಂಬವು ಆರ್ಥಿಕವಾಗಿ ಕಷ್ಟಪಡುತ್ತಿತ್ತು. ಇದರಿಂದಾಗಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿಸಿಎ) ಸೆಮಿಸ್ಟರ್‌ನ ಬೋಧನಾ ಶುಲ್ಕವನ್ನು ಸಹ ಕಟ್ಟಲು ಪರದಾಡಬೇಕಾಯಿತು ಎಂದು ಹೇಳಿದ್ದಾನೆ. ʼʼನಾನು ಕಾಲೇಜ್ನಲ್ಲಿ ಓದುತ್ತಿದ್ದಾಗ ಕೇವಲ 15,000 ರುಪಾಯಿ ಮೊತ್ತದ ಫೀಸ್ ಕಟ್ಟಲು ತಂದೆ-ತಾಯಿ ದೊಡ್ಡ ತ್ಯಾಗಗಳನ್ನೇ ಮಾಡಿದ್ದಾರೆʼʼ ಎಂದಿದ್ದಾನೆ.
ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್ ನಾಗರಹಾವು
ʼʼಒಂದು ಸೆಮಿಸ್ಟರ್‌ನ 15,000 ರುಪಾಯಿ ಫೀಸ್ ಕಟ್ಟಲು ತಂದೆ ನನ್ನ ತಾಯಿಯ ಚಿನ್ನದ ಒಡವೆಗಳನ್ನು ಮಾರಿದರು. ನನ್ನ ತಾಯಿ ಒಂದು ಮಾತನ್ನೂ ಹೇಳದೆ ಚಿನ್ನದ ಬಳೆಗಳನ್ನು ನೀಡಿದ್ದನ್ನು ನಾನು ನೋಡಿದ್ದೇನೆ. ಅವರು ಅಳಲಿಲ್ಲ. ಅವರು ನನ್ನನ್ನು ನೋಡಿ ಬಳೆ ನೀಡಿದರು. ಆ ರಾತ್ರಿ ನನಗೆ ನಿದ್ರೆ ಬರಲಿಲ್ಲʼʼ ಎಂದು ನೆನಪಿಸಿಕೊಂಡು ಭಾವುಕನಾಗಿದ್ದಾನೆ. ಆದರೆ ವರ್ಷಗಳ ನಂತರ, ಅಮೆರಿಕದ ಮೈಕ್ರೋಸಾಫ್ಟ್‌ನ ಸಿಯಾಟಲ್ ಕಚೇರಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು ವಾರ್ಷಿಕ 1.9 ಕೋಟಿ ರುಪಾಯಿ ಸಂಬಲ ಪಡೆಯುತ್ತಿದ್ದಾನೆ.
ಆ ಸಂದರ್ಭದಲ್ಲಿ ತಾಯಿಗೆ ಕರೆ ಮಾಡಿ, "ನಿನಗೆ ಇಷ್ಟ ಬಂದಷ್ಟು ಒಡವೆಗಳನ್ನು ಕೊಂಡುಕೋ" ಎಂದು ಹೇಳಿದ್ದಾನೆ. ಅದಕ್ಕೆ ತಾಯಿ ನೀಡಿದ ಉತ್ತರ ನಿಜಕ್ಕೂ ಮನ ಮಿಡಿಯುವಂತಿತ್ತು. ʼʼಮಗನೇ, ನಾನು ಎಲ್ಲವನ್ನೂ ಮರಳಿ ಪಡೆದುಕೊಂಡೆʼʼ ಎಂದರು. ಈ ಘಟನೆಯನ್ನು ಹಂಚಿಕೊಂಡ ಮನು ಅಗ್ರವಾಲ್, "ಕೆಲವು ಸಾಲಗಳು ತೀರಿಸಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾನೆ. ಅಗರವಾಲ್ 2017ರಲ್ಲಿ ಅಮರಿಕದಲ್ಲಿ ಮೈಕ್ರೋಸಾಫ್ಟ್ ಕಂಪನಿಗೆ ಸೇರಿದ್ದು 2020ರಲ್ಲಿ ಭಾರತಕ್ಕೆ ಮರಳಿದ್ದಾನೆ.
ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರೊಬ್ಬರು, "ನಿಜವಾಗಿಯೂ ಸ್ಪೂರ್ತಿದಾಯಕ. ನಮ್ಮ ಪೋಷಕರು ನಮಗಾಗಿ ಏನೇ ಮಾಡಿದರೂ ಅದು ಅಮೂಲ್ಯ" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼನೀವು ಯಶಸ್ಸು ಸಾಧಿಸುವುದೇ ನಿಮ್ಮ ತಾಯಿಗೆ ದೊಡ್ಡ ಉಡುಗೊರೆʼʼ ಎಂದು ಹೇಳಿದ್ದಾರೆ.