ಲಖನೌ: ಉತ್ತರ ಪ್ರದೇಶದ (Uttar Pradesh) ಸೋನ್‌ಭದ್ರದಲ್ಲಿ (Sonbhadra) ಪತ್ನಿಯನ್ನೇ ನೀನು ಯಾರು ಎಂದು ಪತಿ ಪ್ರಶ್ನಿಸಿರುವ ಘಟನೆ ನಡೆದಿದ್ದು, ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಮದುವೆ ಒಪ್ಪಿಕೊಳ್ಳಲು ನಿರಾಕರಿಸಿದ ಆತನ ಮನೆಯ ಮುಂದೆಯೇ ಪತ್ನಿ ಧರಣಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಯುವಕ ಮತ್ತು ಜಾರ್ಖಂಡ್‌ನ (Jharkhand) ಯುವತಿ ನಡುವಿನ ಫೇಸ್‌ಬುಕ್ (Facebook) ಸ್ನೇಹವು ದಾಂಪತ್ಯಕ್ಕೆ ಮುನ್ನುಡಿ ಬರೆದಿದ್ದು, ಮದುವೆಯಾಗುತ್ತಿದ್ದಂತೆ ಡ್ರಾಮಾಟಿಕ್ ತಿರುವು ಪಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸೋನ್‌ಭದ್ರದ ಯುವಕನ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಯುವತಿ ಅನಂತರ ಆನ್‌ಲೈನ್ ಚಾಟಿಂಗ್, ವಿಡಿಯೊ ಕರೆಗಳು ನಡೆದು ಸಲುಗೆ ಪ್ರೀತಿ-ಪ್ರೇಮಕ್ಕೆ ತಿರುಗಿ ಶೀಘ್ರವೇ ಸಂಬಂಧವಾಗಿ ಬೆಳೆದಿದೆ. ಇಬ್ಬರು ಖುದ್ದಾಗಿ ಭೇಟಿಯಾಗಿ ಸ್ಥಳೀಯ ದೇವಸ್ಥಾನದಲ್ಲಿ ‘ಸಪ್ತಪದಿ’ ಸುತ್ತುವ ಆಚರಣೆಯೊಂದಿಗೆ ವಿವಾಹವಾಗಿದ್ದಾರೆ ಎನ್ನಲಾಗಿದೆ.
ಇತ್ತ ಯುವತಿ ತನ್ನ ಕುಟುಂಬವನ್ನೇ ತೊರೆದು ಯುವಕನೊಂದಿಗೆ ಹೊಸ ಜೀವನ ಆರಂಭಿಸಲು ಅನ್ಪಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಎನ್‌ಸಿಎಲ್ ಕಾಕ್ರಿ ಕಾಲೊನಿಯಲ್ಲಿರುವ ಪತಿಯ ಮನೆಗೆ ತೆರಳಿದ್ದಾಳೆ. ಆದರೆ ಆತ ಆಕೆಯನ್ನು ಮನೆಗೆ ಸ್ವಾಗತಿಸುವ ಬದಲು, “ನೀವು ಯಾರು? ನನಗೆ ಗೊತ್ತಿಲ್ಲ” ಎಂದು ವಿವಾಹವನ್ನೇ ನಿರಾಕರಿಸಿದ್ದಾನೆ. ಈ ನಿರಾಕರಣೆಯಿಂದ ಆಘಾತಗೊಂಡ ಯುವತಿ ಕಣ್ಣೀರಿಡುತ್ತಾ ಅವನ ಮನೆಯ ಮುಂದೆ ಧರಣಿ ಕುಳಿತು ವಂಚನೆಯ ಆರೋಪ ಮಾಡಿದ್ದಾಳೆ. ಇನ್ನೂ ಸ್ಥಳದಲ್ಲಿ ಜನಸಂದಣಿ ಹೆಚ್ಚಾಗಿ ವಿಷಯ ಗಂಭೀರವಾದ ಹಿನ್ನೆಲೆ ಪೊಲೀಸರು ಮಧ್ಯಸ್ಥಿಕೆಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಯುವತಿ, ಅನ್ಪಾರಾ ಠಾಣೆಯಲ್ಲಿ ವಂಚನೆ ಕುರಿತು ಲಿಖಿತ ದೂರು ಸಲ್ಲಿಸಿದ್ದಾಳೆ. ಫೇಸ್‌ಬುಕ್ ಮೂಲಕ ಯುವಕ ತನ್ನನ್ನು ಆಕರ್ಷಿಸಿ, ವಿವಾಹವಾಗಿ ಈಗ ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಅಲ್ಲದೆ ನ್ಯಾಯ ಮತ್ತು ತನ್ನ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿದ್ದಾಳೆ.
ಸದ್ಯ ಪೊಲೀಸರು ಪ್ರಕರಣವನ್ನು ತನಿಖೆಗೆ ಒಳಪಡಿಸಿದ್ದಾರೆ. ವಿವಾಹದ ಕಾನೂನು ಆಯಾಮಗಳನ್ನು ಮತ್ತು ಯುವತಿಯ ಆರೋಪಗಳನ್ನು ಪರಿಶೀಲಿಸಲಾಗುವುದು. ಆರೋಪಗಳು ಸತ್ಯವೆಂದು ಕಂಡುಬಂದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.