ಬಿಹಾರ,ಸೆ.29: ಇತ್ತೀಚೆಗೆ ರೀಲ್ಸ್ ಕ್ರೇಜ್ ಅನ್ನೋದು ಮಿತಿ ಮೀರಿ ಬಿಟ್ಟಿದೆ. ಹೆಚ್ಚಿನ ಲೈಕ್ಸ್- ವೀವ್ಸ್ ಗಾಗಿ ಅಪಾಯಕಾರಿ ರೀಲ್ಸ್ ಗಳನ್ನು ಚಿತ್ರೀಕರಿಸುತ್ತಿದ್ದಾರೆ. ಇದೀಗ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರು ಸರ್ಕಾರಿ ಬಂದೂಕು ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದಾರೆ. ಪಶ್ಚಿಮ ಚಂಪಾರಣ್ ಜಿಲ್ಲೆಯ ಸಾಥಿ ಪೊಲೀಸ್ ಠಾಣೆಯ ಮಹಿಳಾ ಕಾನ್‌ಸ್ಟೇಬಲ್ ಒಬ್ಬರು ಸಾಮಾನ್ಯ ಉಡುಪಿನಲ್ಲಿ ಸರ್ಕಾರಿ ಬಂದೂಕು ಹಿಡಿದು ರೀಲ್ಸ್ (Viral News) ಮಾಡಿ ಅಮಾನತುಗೊಂಡಿದ್ದಾರೆ.
ಇಲಾಖೆಯ ನಿಯಮಗಳು ಮತ್ತು ಸೋಷಿಯಲ್ ಮೀಡಿಯಾ ಬಳಕೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ. ಅವರ ವಿರುದ್ಧ ಇದೀಗ ಕಾನೂನು ಕ್ರಮ ಕೈಗೆತ್ತಿಕೊಳ್ಳಲಾಗಿದೆ.
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಸಾಥಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್ ಸರ್ಕಾರಿ ಬಂದೂಕನ್ನು ಹಿಡಿದುಕೊಂಡು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಪಶ್ಚಿಮ ಚಂಪಾರಣ್ ಪೊಲೀಸ್ ವರಿಷ್ಠಾ ಅಧಿಕಾರಿಯ ಗಮನಕ್ಕೆ ಬಂದಿದೆ. ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶ ನೀಡಿದ್ದಾರೆ.
ಸರ್ಕಾರ ನೀಡಿದ ಶಸ್ತ್ರಾಸ್ತ್ರವನ್ನು ಹಿಡಿದು ನಾಗರಿಕ ಉಡುಪಿನಲ್ಲಿ ವೀಡಿಯೊ ಚಿತ್ರೀಕರಿಸಿ ಅದನ್ನು ಹಂಚಿಕೊಂಡಿದ್ದು ಇಲಾಖಾ ನಿಯಮಗಳಿಗೆ ವಿರುದ್ಧವಾಗಿದೆ. ಬಿಹಾರ ಪೊಲೀಸ್ ಪ್ರಧಾನ ಕಚೇರಿ ಯಲ್ಲಿ ನಿಯಮ ಉಲ್ಲಂಘಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಹಾಗಾಗಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಎಸ್‌ಪಿ ಅವರು ಕಾನ್‌ಸ್ಟೇಬಲ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲು ಆದೇಶಿಸಿದ್ದಾರೆ.