ವಾರಣಾಸಿ,ಜು.17: ಉತ್ತರ ಪ್ರದೇಶದಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ವಿದೇಶಿ ಪ್ರವಾಸಿಯೊಬ್ಬ ಸಾರ್ವಜನಿಕರ ಜೊತೆ ಮನಬಂದಂತೆ ವರ್ತಿಸಿದ್ದಾನೆ. ವಾರಣಾಸಿಯ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಯೊಬ್ಬ ಅರೆ ಬೆತ್ತಲೆ ಸ್ಥಿತಿಯಲ್ಲಿದ್ದು ಹಲವಾರು ಮನೆಗಳಿಗೆ ನುಗ್ಗಿ ವಸ್ತುಗಳನ್ನು ಎಸೆದು, ನಿವಾಸಿಗಳ ಮೇಲೆ ಹಲ್ಲೆ ನಡೆಸಿ ಅವಾಂತರ ಸೃಷ್ಟಿ ಮಾಡಿದ್ದಾನೆ. ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಆ ವ್ಯಕ್ತಿ ಹತ್ತಿರದ ಪ್ರದೇಶದಲ್ಲಿ ಓಡಾಡಿ, ನಂತರ ವಸತಿ ಕಟ್ಟಡವನ್ನು ಪ್ರವೇಶಿಸಿ, ಮನೆಯ ಸಾಮಗ್ರಿಗಳನ್ನು ಧ್ವಂಸಗೊಳಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದಾನೆ. ವಸತಿ ಕಟ್ಟಡದೊಳಗೆ ಆ ವ್ಯಕ್ತಿ ಗಲಾಟೆ ಸೃಷ್ಟಿಸುತ್ತಿರುವುದನ್ನು ದೃಶ್ಯದ ವೀಡಿಯೊಗಳು ತೋರಿಸುತ್ತವೆ. ಆತ ಕಿರುಚುವುದು, ಜಿಗಿಯುವುದು ಮತ್ತು ಸ್ಥಳೀಯರ ಮೇಲೆ ಹಲ್ಲೆ ನಡೆಸುವುದನ್ನು ಕಾಣಬಹುದು.
ವಿಡಿಯೋ ನೋಡಿ:
ಸ್ಥಳೀಯರು ಆತನನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನ ಮಾಡಿದಾಗ ಆತ ಮತ್ತಷ್ಟು ವಿಕೃತಿಯಾಗಿ ವರ್ತಿಸಿದ್ದು ಸ್ಥಳೀಯ ನಿವಾಸಿಯೊಬ್ಬರ ಕೈಗೆ ಬಲವಾಗಿ ಕಚ್ಚಿದ್ದಾನೆ. ಪರಿಸ್ಥಿತಿ ಗಂಭೀರ ಆದಾಗ ಸ್ಥಳೀಯರೆಲ್ಲರೂ ಒಟ್ಟಾಗಿ ಸೇರಿ ಆತನನ್ನು ಪೊಲೀಸರಿಗೆ ಒಪ್ಪಿಸಲು ಕರೆ ಮಾಡಿದ್ದಾರೆ. ಕೊಟ್ವಾಲಿ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ತಲುಪಿ ಆ ವ್ಯಕ್ತಿಯನ್ನು ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.ಆದಾಗ್ಯೂ, ವಿದೇಶಿ ಪ್ರಜೆ ಪೊಲೀಸ್ ಸಿಬ್ಬಂದಿಯೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸಿ ಅವರ ಮೇಲೆಯೆ ಹಲ್ಲೆ ನಡೆಸಲು ಹೋಗಿದ್ದಾನೆ
ಬಂಧನದ ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳ ಪಡಿಸಿದ್ದಾರೆ. ಆತನ ಈ ವರ್ತನೆಗೆ ಮಾನಸಿಕ ಅಸ್ವಸ್ಥತೆ ಕಾರಣವೇ ಅಥವಾ ಅತಿಯಾದ ಮಾದಕ ದ್ರವ್ಯ ಸೇವನೆಯೇ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ.
ವಾರಣಾಸಿಯಲ್ಲಿ ಸಿಗುವ ಪ್ರಸಿದ್ಧ 'ಭಾಂಗ್' ಗಾಂಜಾ ಮಿಶ್ರಿತ ಮಾದಕ ದ್ರವ್ಯ ಅತಿಯಾಗಿ ಸೇವಿಸಿದ್ದರಿಂದಲೇ ಆತ ನಿಯಂತ್ರಣ ಕಳೆದುಕೊಂಡು ಹೀಗೆ ಆಡಿದ್ದಾನೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದು ಆತನ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.