ನವದೆಹಲಿ, ಏ. 16: ಲೆನ್ಸ್‌ಕಾರ್ಟ್ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ವಿಧಿಸಿರುವ ನಿಯಮದ ಬಗ್ಗೆ ಭಾರಿ ವಿವಾದ ಸೃಷ್ಟಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಿಯಮವನ್ನು ಒಳಗೊಂಡ ಪೋಸ್ಟ್ ಭಾರಿ ವೈರಲ್ (Viral News) ಆಗಿದೆ. ಲೆನ್ಸ್‌ಕಾರ್ಟ್ ಸಂಸ್ಥೆಯು ಉದ್ಯೋಗಿಗಳಿಗೆ ಬಿಂದಿ ಮತ್ತು ತಿಲಕ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಈ ಬಗ್ಗೆ ಬಳಕೆದಾರರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಂಸ್ಥಾಪಕ ಪಿಯೂಷ್ ಬನ್ಸಾಲ್ ಸ್ಪಷ್ಟನೆ ನೀಡಿದ್ದಾರೆ.
ಲೆನ್ಸ್‌ಕಾರ್ಟ್ ಹಿಜಾಬ್ ಧರಿಸಲು ಅವಕಾಶ ನೀಡಿದ್ದು ಬಿಂದಿ ಮತ್ತು ತಿಲಕವನ್ನು ಧರಿಸಲು ನಿಷೇಧ ಹೇರಿದೆ ಎಂದು ಹೇಳುವ ಸ್ಕ್ರೀನ್‌ಶಾಟ್ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ಇದು ಉದ್ಯೋಗಿಗಳ ಡ್ರೆಸ್ ಕೋಡ್ ಮತ್ತು ಧಾರ್ಮಿಕ ಅಭಿವ್ಯಕ್ತಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದೀಗ ಸಂಸ್ಥಾಪಕ ಪೆಯೂಷ್ ಬನ್ಸಾಲ್ ಈ ಗೊಂದಲಕ್ಕೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವೈರಲ್ ಪೋಸ್ಟ್:
ಲೆನ್ಸ್‌ಕಾರ್ಟ್ ಸಂಸ್ಥೆಯ ಗೈಡ್ ಲೈನ್ಸ್‌ನ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ಉದ್ಯೋಗಿಗಳು ಬಿಂದಿ, ತಿಲಕ ಅಥವಾ ಕೈಗೆ ದಾರ ಕಟ್ಟುವಂತಿಲ್ಲ ಎಂದು ಹೇಳಲಾಗಿತ್ತು. ಈ ಪೋಸ್ಟ್ ಭಾರಿ ಚರ್ಚೆಗೆ ಕಾರಣವಾಯಿತು. ಅನೇಕ ಬಳಕೆದಾರರು ಕಂಪನಿ ನಡೆಯನ್ನು ಟೀಕಿಸಿ ಈ ನಿಯಮವನ್ನು ಅನ್ಯಾಯವೆಂದು ಕರೆದರು. ಒಬ್ಬರು "ಹಿಜಾಬ್‌ಗೆ ಅವಕಾಶವಿದೆ. ಆದರೆ ಹಿಂದೂ ಉದ್ಯೋಗಿಗಳು ಕುಂಕುಮ ಬಿಂದಿ ಧರಿಸುವ ಹಕ್ಕನ್ನು ನಿರಾಕರಿಸಿದ್ದೇಕೆ?'' ಎಂದು ಆಕ್ರೋಶ ಹೊರ ಹಾಕಿದಾರೆ.
ಮಿನರಲ್ ವಾಟರ್ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ರೈಲಿನಲ್ಲಿ ಮಾರಾಟ
ಮತ್ತೊಬ್ಬರು ʼʼಇದು ಮೂರ್ಖತನದ ಪರಮಾವಧಿ. ಲೆನ್ಸ್‌ಕಾರ್ಟ್ ಎಂತಹ ನಾಚಿಕೆಗೇಡಿನ ಕಂಪನಿ. ಅವರು ಭಾರತದಲ್ಲಿ ವ್ಯವಹಾರ ಮಾಡಿ ಜನರ ಭಾವನೆಗಳನ್ನು ನೋಯಿಸಲು ಬಯಸುತ್ತಾರೆʼʼ ಎಂದು ಬರೆದಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಲೆನ್ಸ್‌ಕಾರ್ಟ್ ಸಂಸ್ಥಾಪಕ ಪಿಯೂಷ್ ಬನ್ಸಾಲ್ ಎಕ್ಸ್‌ನಲ್ಲಿ ಕ್ಷಮೆ ಕೋರಿದ್ದಾರೆ.
ʼʼಈ ದಾಖಲೆಯು ಹಳೆಯದಾಗಿದ್ದು ನಮ್ಮ ಪ್ರಸ್ತುತ ಮಾರ್ಗಸೂಚಿಗಳನ್ನು ಇದು ಪ್ರತಿಬಿಂಬಿಸುವುದಿಲ್ಲ. ಬಿಂದಿ ಮತ್ತು ತಿಲಕ ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ಅಭಿವ್ಯಕ್ತಿಯ ಮೇಲೆ ಯಾವುದೇ ನಿರ್ಬಂಧಗಳಿಲ್ಲʼʼ ಎಂದಿದ್ದಾರೆ. ʼʼಈ ಹಳೆಯ ದಾಖಲೆಯಿಂದ ಉಂಟಾದ ಗೊಂದಲಕ್ಕೆ ಕ್ಷಮೆಯಿರಲಿʼʼ ಎಂದು ಅವರು ವಿನಂತಿಸಿದ್ದಾರೆ.