ಬೆಂಗಳೂರು, ಸೆ. 1: ಇತ್ತೀಚೆಗೆ ಆನ್‌ಲೈನ್ ಆ್ಯಪ್ ಆಧಾರಿತ ವಾಹನ ಚಾಲಕರು ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಬೆಂಗಳೂರಿನಲ್ಲಿ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡುವ ಘಟನೆಗಳು ದಿನಕ್ಕೆ ಒಂದಾದರೂ ನಡೆಯುತ್ತವೆ. ಇದಕ್ಕೆ ಸಾಕ್ಷಿ ಎನ್ನುವಂತೆ ರ‍್ಯಾಪಿಡೋ ಚಾಲಕನೊಬ್ಬ ಆ್ಯಪ್‌ನಲ್ಲಿ ತೋರಿಸಿದ ದರಕ್ಕಿಂತ 900 ರುಪಾಯಿ ಹೆಚ್ಚುವರಿ ಹಣವನ್ನು ಮಹಿಳೆ ಬಳಿ ಬೇಡಿಕೆಯಿಟ್ಟ ಘಟನೆ ನಡೆದಿದೆ. ಈ ಬಗ್ಗೆ ತಮಗಾದ ಅನುಭವವನ್ನು ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿದ್ದಾರೆ.
ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕ ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲಾಗಿದ್ದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಬೇಡಿಕೆ ಇಟ್ಟ ಬಗ್ಗೆ ಮಹಿಳೆ ಹಂಚಿಕೊಂಡಿದ್ದಾರೆ. ಶಾಲಿನಿ ಎನ್ನುವವರು ಬೆಂಗಳೂರಿನಲ್ಲಿ ರ‍್ಯಾಪಿಡೋ ಬುಕ್ ಮಾಡಿದ್ದರು. ಆದರೆ ಸ್ಥಳಕ್ಕೆ ಬರುವ ಮೊದಲು ಚಾಲಕ ಮೆಸೇಜ್ ಮಾಡಿ ನೇರವಾಗಿ 900 ರುಪಾಯಿ ನೀಡುವಂತೆ ಕೇಳಿದ್ದಾನೆ. ಆ್ಯಪ್ ಪ್ರದರ್ಶಿಸಿದ ದರಕ್ಕಿಂತ ಹೆಚ್ಚುವರಿ ಮೊತ್ತ ಕೇಳಿದ್ದರಿಂದ ರೈಡ್ ರದ್ದುಗೊಳಿಸುವಂತೆ ಚಾಲಕನ ಬಳಿ ಮಹಿಳೆ ಹೇಳಿದ್ದಾರೆ.
Viral Video: ಮೈ ಜುಮ್ಮೆನಿಸುವ ದೃಶ್ಯ; ಸ್ಮಶಾನದಲ್ಲಿ ಸುಡುತ್ತಿದ್ದ ಹೆಣದ ಮಾಂಸ ತಿಂದ ಮಹಿಳೆ!
ಈ ಅನುಭವವನ್ನು ಶೇರ್ ಮಾಡಿದ ಮಹಿಳೆ, "ಹೆಚ್ಚುವರಿ ಹಣ ಬೇಕಿದ್ದರೆ ರೈಡ್ ಅನ್ನು ಯಾಕೆ ಸ್ವೀಕರಿಸಬೇಕು? ಅಪ್ಲಿಕೇಶನ್‌ನಲ್ಲಿ ಉಲ್ಲೇಖಿಸಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಕೇಳುತ್ತಾರೆ. ಇದು ಒಮ್ಮೆ ಮಾತ್ರ ಸಂಭವಿಸುವುದಲ್ಲ, ಬೆಂಗಳೂರಿನಲ್ಲಿ ಹಣ ವಸೂಲಿ ಮಾಡುವ ಪ್ರಕರಣ ಪದೇ ಪದೆ ನಡೆಯುತ್ತಿವೆʼʼ ಎಂದೂ ಅವರು ದೂರಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು, ʼʼಇದು ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ಚೆನ್ನೈ ಸೇರಿ ಹಲವು ನಗರಗಳಲ್ಲಿ ಸಾಮಾನ್ಯ. ಅದರಲ್ಲೂ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳ ಬಳಿ ಚಾಲಕರು ಹೆಚ್ಚುವರಿ ಹಣ ಕೇಳುವುದನ್ನೇ ರೂಢಿ ಮಾಡಿಕೊಂಡಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇಂತಹ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.