ಕೊಚ್ಚಿ, ಜೂ. 16: ನಾಗರಿಕ ಪ್ರಜ್ಞೆ ಮರೆಯಾಗುತ್ತಿರುವ ಅನೇಕ ಘಟನೆಗಳು ಇತ್ತೀಚೆಗೆ ಅಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡುವುದು, ಅಶಿಸ್ತಿನಿಂದ ವರ್ತಿಸುವುದು ಹೀಗೆ ಅನೇಕ ದೃಶ್ಯ ವೈರಲ್ ಆಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಚಲಿಸುತ್ತಿದ್ದ ವಾಟರ್ ಮೆಟ್ರೋ ಬೋಟ್ ಒಳಗೆ ಪ್ರಯಾಣಿಕರ ಗುಂಪೊಂದು ಡ್ಯಾನ್ಸ್ ಮಾಡಿದೆ. ಬೋಟ್ ಚಲಿಸುತ್ತಿರುವಾಗಲೇ ಗುಜರಾತ್‌ನ ಸಾಂಪ್ರದಾಯಿಕ ಜನಪದ ನೃತ್ಯವಾದ ಗರ್ಬಾವನ್ನು ಕೆಲವು ಪ್ರಯಾಣಿಕರು ಮಾಡಿದ್ದಾರೆ. ಈ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಅವರ ವರ್ತನೆಗೆ ಕಿಡಿಕಾರಿದ್ದಾರೆ.
ಕೊಚ್ಚಿಯ ವಾಟರ್ ಮೆಟ್ರೋದಲ್ಲಿ ಪ್ರಯಾಣಿಕರ ಗುಂಪೊಂದು ಗರ್ಬಾ ನೃತ್ಯ ಮಾಡಿದೆ. ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ವರ್ತಿಸುವುದು ಎಷ್ಟು ಸರಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ಡ್ಯಾನ್ಸ್ ಮಾಡಲು ಆಸಕ್ತಿ ಇದೆ ಎಂದು ಇತರ ಪ್ರಯಾಣಿಕರಿಗೆ ತೊಂದರೆ ಎಸಗಬಾರದು. ಇದು ತಪ್ಪು ಎಂದು ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೊ ನೋಡಿ:
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ವಿಡಿಯೊವನ್ನು ಕೊಚ್ಚಿಯಿಂದ ಫೋರ್ಟ್ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ವಾಟರ್ ಮೆಟ್ರೋದಲ್ಲಿ ಚಿತ್ರೀಕರಿಸಲಾಗಿದೆ. ಬೋಟ್ ಚಲಿಸುತ್ತಿರುವಾಗಲೇ ಕೆಲವರು ಹೆಜ್ಜೆ ಹಾಕಲು ಆರಂಭಿಸಿದ್ದಾರೆ. ಕೆಲವು ಪ್ರಯಾಣಿಕರು ಇದನ್ನು ಆಸಕ್ತಿಯಿಂದ ವೀಕ್ಷಿಸಿದರೆ ಹಲವರು ಕಿರಿಕಿರಿಗೆ ಒಳಗಾಗಿದ್ದಾರೆ.
ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ಆಕ್ರೋಶ
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಕೆಲಚರು ಡ್ಯಾನ್ಸ್ ಮಾಡಿರುವವರನ್ನು ಸಮರ್ಥಿಸಿಕೊಂಡಿದ್ದು, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಾರಿಗೆಯು ಎಲ್ಲ ಪ್ರಯಾಣಿಕರಿಗೆ ಸೇರಿದ್ದು, ಅದನ್ನು ಮನರಂಜನಾ ಸ್ಥಳವಾಗಿ ಪರಿವರ್ತಿಸಬಾರದು ಎಂದು ವಾದಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಟಂಟ್ ಮಾಡುವುದು, ರೀಲ್ಸ್ ಮಾಡುವುದು ಸಾಮಾನ್ಯವಾಗುತ್ತಿದೆ. ಇದರ ನಿಯಂತ್ರಣಕ್ಕೆ ಸರಿಯಾದ ನಿಯಮ ಹೊರಡಿಸಬೇಕು ಎಂದಿದ್ದಾರೆ.