ಲಡಾಖ್, ಆ. 20: ಹಿಂದಿಗಿಂತಲೂ ಇಂದಿನ ತಲೆಮಾರು ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಕೆಲವು ದಿನಗಳಿಂದ ಜೆನ್ ಝೀಗಳಾದ್ದೇ ಹವಾ. ಕೆಲವೆಡೆ ತಮ್ಮದೆ ನಿಲುವುಗಳು ಸರಿ ಎಂಬಂತೆ ಧ್ವನಿ ಎತ್ತುತ್ತಿದ್ದಾರೆ. ಈ ನಡುವೆ ಲಡಾಕ್‌ನ ಚೆಕ್ ಪೋಸ್ಟ್‌ನಲ್ಲಿ ಜೆನ್ ಝೀ ಯುವತಿ ಒಬ್ಬಳು ಸೇನಾ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸುತ್ತಿರುವ ವಿಡಿಯೊವೊಂದು (Viral News) ವೈರಲ್ ಆಗಿದೆ. "ನಾವು ಜೆನ್ ಝೀಗಳು, ಈ ಅನ್ಯಾಯವನ್ನು ಸಹಿಸುವುದಿಲ್ಲʼʼ ಎಂದು ಹೇಳಿ ಪದೇ ಪದೆ ಜಗಳವಾಡಿದ್ದಾಳೆ. ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವತಿಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ಲಡಾಖ್‌ನ ಚೆಕ್‌ಪಾಯಿಂಟ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿಗೆ ಬಂದ ಪ್ರವಾಸಿಗರು ಮತ್ತು ಇತರ ಪ್ರಯಾಣಿಕರನ್ನು ಸುಮಾರು ಐದು ಗಂಟೆಗಳ ಕಾಲ ನಿಲ್ಲಿಸಲಾಗಿದೆ ಎನ್ನುವ ಕಾರಣಕ್ಕೆ ಯುವತಿ ಆಕ್ರೋಶಗೊಂಡಿದ್ದಾಳೆ. ಈ ದೀರ್ಘ ವಿಳಂಬದ ಬಗ್ಗೆ ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸುತ್ತಿರುವುದು ವಿಡಿಯೊದಲ್ಲಿದೆ.
ವಿಐಪಿಗಳ ಸಂಚಾರಕ್ಕಾಗಿ ಪ್ರವಾಸಿಗರಿಗೆ ಸ್ವಲ್ಪ ಸಮಯದವರೆಗೆ ನಿರ್ಬಂಧ ಹೆರಲಾಗಿತ್ತು. ಹೀಗಾಗಿ ಸುಮಾರು ಐದು ಗಂಟೆಯವರೆಗೆ ಪ್ರವಾಸಿಗರನ್ನು ತಡೆದು ನಿಲ್ಲಿಸಲಾಗಿತ್ತು. ಇದರಿಂದ ಕೆರಳಿದ ಯುವತಿ, ʼʼನಾವು ಜೆನ್ ಝೀಗಳು, ಈ ಅನ್ಯಾಯವನ್ನು ಸಹಿಸುವುದಿಲ್ಲ" ಎಂದು ಸಿಬ್ಬಂದಿ ಜತೆಗೆ ಜಗಳವಾಡಿದ್ದಾಳೆ. ಅಷ್ಟೆ ಅಲ್ಲದೆ ಸಿಬ್ಬಂದಿ ಜತೆ ವೈಯಕ್ತಿಕವಾಗಿ ಕಿರಿಕ್ ಮಾಡಿದ್ದಾಳೆ. "ನಮ್ಮ ತೆರಿಗೆಯಿಂದಲೇ ನಿಮಗೆಲ್ಲ ಸಂಬಳ ಬರುತ್ತಿರುವುದು. ಇದರಿಂದಲೇ ನೀವೆಲ್ಲ ಬದುಕುವುದು. ಈಗ ನೀವು ನಮಗಿಂತ ಮೇಲೆಯೇ?" ಎಂದು ಹೇಳಿದ್ದು ಭಾರಿ ವಿವಾದ ಸೃಷ್ಟಿಸಿದೆ.
ವಿಡಿಯೊ ನೋಡಿ:
ಈ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡದಿರುವ ಬಗ್ಗೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದು ಅಧಿಕಾರಿಗಳು ಮಧ್ಯಪ್ರವೇಶಿಸುವ ವರೆಗೂ ಸ್ಥಳಾಂತರಗೊಳ್ಳಲು ನಿರಾಕರಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥರ ಆಗಮನದ ಕಾರಣದಿಂದ ಭದ್ರತಾ ಕಾರಣಗಳಿಗಾಗಿ ಕಾರ್ಗಿಲ್‌ನ ಮಿನಿಮಾರ್ಗ್ ಚೆಕ್‌ಪೋಸ್ಟ್ ಬಳಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ರೈಲು ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಪ್ರೇಯಸಿಯ ಕಾಲು ಹಿಡಿದು ಯುವಕನ ಹೈಡ್ರಾಮ
ಸದ್ಯ ಈ ವಿಡಿಯೋ ವೈರಲ್ ಆದ ನಂತರ, ಸೇನಾ ಮಾಜಿ ಅಧಿಕಾರಿಗಳು ಯುವತಿಯ ವರ್ತನೆಯನ್ನು ಟೀಕಿಸಿದ್ದಾರೆ. ಕೆಜೆಎಸ್ ಧಿಲ್ಲೋನ್, ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ, ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಸೇರಿ ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ನಮ್ಮ ಸೈನಿಕರು ಹಗಲು ರಾತ್ರಿ ನಿಮ್ಮನ್ನು ಕಾಪಾಡುತ್ತಿರುವುದರಿಂದ ನೀವು ಇಂತಹ ಪ್ರದೇಶಗಳಿಗೆ ಹೋಗಬಹುದು. ಅವರ ಪ್ರಾಣವನ್ನೇ ಪಣಕ್ಕಿಟ್ಟು ದುಡಿಯುತ್ತಾರೆ. ಯಾವಾಗಲೂ ಗೌರವದಿಂದಿರಿ. ಅರ್ಹತೆಯನ್ನು ಕೇಳುವ ಮೊದಲು ಉತ್ತಮ ಕಾನೂನು ಪಾಲಿಸುವ ನಾಗರಿಕರಾಗಲು ಕಲಿಯಿರಿ" ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಮಹಿಳೆಯ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.