ಭೋಪಾಲ್: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಚಿತ್ರಹಿಂಸೆ ನೀಡುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿದೆ. ಮಧ್ಯ ಪ್ರದೇಶದ (Madhya Pradesh) ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಮುಖ್ಯ ಶಿಕ್ಷಕ ಮಹೇಶ್ ಚೌಧರಿ ತರಗತಿಯೊಳಗೆ ತನ್ನ ವಿದ್ಯಾರ್ಥಿಗಳಿಗೆ ಹಿಂಸೆ ನೀಡಿದ್ದಾನೆ.
ಆಗಸ್ಟ್ 26ರಂದು ಸಿಯೋನಿ ಜಿಲ್ಲೆಯ ಕುರೈನಲ್ಲಿರುವ ಅರ್ಜುನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ವಿಡಿಯೊದಲ್ಲಿ ಚೌಧರಿ 6 ವರ್ಷದ ಬಾಲಕ ರವಿ ಭಲವಿಯ ಬಾಯಿಯನ್ನು ಒತ್ತಿ ನೆಲದ ಮೇಲೆ ಮಲಗಿಸುತ್ತಿರುವುದನ್ನು ಕಂಡು ಬಂದಿದೆ. ನಂತರ ಮಗುವಿನ ಬೆನ್ನುಮೂಳೆಯ ಮೇಲೆ ಕೋಲು ಇಟ್ಟು ಕೆಳಗೆ ಒತ್ತಿದ್ದಾನೆ. ಇದರಿಂದ ಬಾಲಕನ ಬೆನ್ನಿನ ಮೇಲೆ ಗಾಯವಾಗಿದೆ. ಅಲ್ಲದೆ ಬೇರೊಬ್ಬ ಬಾಲಕಿಯನ್ನು ಕೂಡ ಥಳಿಸಿರುವ ದೃಶ್ಯ ವಿಡಿಯೊದಲ್ಲಿದೆ.
ಮಕ್ಕಳ ಮೇಲೆ ನಿಯಮಿತವಾಗಿ ಹಲ್ಲೆ ನಡೆಸುತ್ತಿರುವ ಚೌಧರಿ ವಿರುದ್ಧ ದೂರು ಕೇಳಿಬಂದಿದ್ದವು ಎಂದು ವರದಿಯಾಗಿದೆ. ಮಕ್ಕಳ ಪೋಷಕರು ನೀಡುತ್ತಿರುವ ದೂರುಗಳು ಹೆಚ್ಚಾದಂತೆ ಸ್ವಯಂ ನೋಡುವುದಕ್ಕಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಾಕೇಶ್ ಸನೋದಿಯಾ ಶಾಲೆಗೆ ಹಠಾತ್ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಚೌಧರಿಯು ವಿದ್ಯಾರ್ಥಿಗಳನ್ನು ದೈಹಿಕವಾಗಿ ಹಿಂಸಿಸುತ್ತಿರುವುದನ್ನು ಕಣ್ಣಾರೆ ನೋಡಿದ್ದಾರೆ.
ವಿಡಿಯೊ ವೀಕ್ಷಿಸಿ:
ವೈರಲ್ ವಿಡಿಯೊವನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಡಳಿತವು ಮೂವರು ಸದಸ್ಯರ ತನಿಖಾ ಸಮಿತಿಯನ್ನು ತ್ವರಿತವಾಗಿ ರಚಿಸಿದೆ. ಘಟನೆಯು ದೃಢಪಟ್ಟಿದ್ದರಿಂದ ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತ ಅಮರ್ ಸಿಂಗ್ ಉಯಿಕೆ ಚೌಧರಿಯನ್ನು ಅಮಾನತುಗೊಳಿಸುವಂತೆ ಆದೇಶಿಸಿದರು. ಅಂದಿನಿಂದ ಅವರನ್ನು ಘನ್ಸೋರ್‌ನಲ್ಲಿರುವ ಬ್ಲಾಕ್ ಅಧಿಕಾರಿ ಕಚೇರಿಗೆ ನಿಯೋಜಿಸಲಾಗಿದೆ.
ಇನ್ನು ಶಿಕ್ಷಕನಿಂದ ಹಿಂಸೆಗೊಳಗಾದ ಬಾಲಕನ ತಂದೆ ವಿಜಯ್ ಭಲವಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 296, 115(2) ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಹಲವು ನಿಬಂಧನೆಗಳ ಅಡಿಯಲ್ಲಿ ಪ್ರಕಣ ದಾಖಲಿಸಲಾಗಿದೆ. ಗಾಯಗೊಂಡ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: Viral Video: ಸುಖಾಸುಮ್ಮನೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಇನ್ಸ್‌ಪೆಕ್ಟರ್- ವಿಡಿಯೋ ವೈರಲ್