ಚಂಡೀಗಢ, ಆ. 25: ನಗರ ಪ್ರದೇಶಗಳು ಎಷ್ಟೇ ಅಭಿವೃದ್ಧಿ ಹೊಂದಿದರೂ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಐಷಾರಾಮಿ ವಸತಿ ಕೇಂದ್ರವಾದ ಹರಿಯಾಣದ ಗುರುಗ್ರಾಮದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ತೀವ್ರವಾಗಿ ಸುರಿದ ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆಗಳೇ ಜಲವೃತಗೊಂಡವು. ಇದರಿಂದ ರಸ್ತೆಯಲ್ಲಿಯೇ ವಾಹನಗಳು ಸಿಲುಕಿದ್ದು, ಉದ್ಯೋಗಿಗಳು, ಶಾಲಾ ಮಕ್ಕಳು ಗಂಟೆಗಟ್ಟಲೆ ಪರದಾಡಿದರು. ನೀರು ಹೆಚ್ಚಾದ ಕಾರಣ ಚಾಲಕರು ಮತ್ತು ಅಟೆಂಡರ್‌ಗಳು ಬಸ್ ಮೇಲೇರಿ ಕುಳಿತುಕೊಂಡಿರುವ ದೃಶ್ಯ (Viral News) ಕಂಡುಬಂದಿದೆ.
ಪ್ರೀಮಿಯಂ ಮನೆಗಳು, ಉನ್ನತ ಮಟ್ಟದ ವಿದ್ಯಾ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಚೇರಿಗಳನ್ನು ಹೊಂದಿರುವ ಈ ನಗರವು ಇನ್ನೂ ಮೂಲಭೂತ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ 'ಮಿಲೇನಿಯಂ ಸಿಟಿ' ಗುರುಗ್ರಾಮದಲ್ಲಿ ಸುರಿದ ಭಾರೀ ಮಳೆಯು ನಗರದ ದುರ್ಬಲ ಮೂಲಸೌಕರ್ಯವನ್ನು ಮತ್ತೊಮ್ಮೆ ಬಯಲು ಮಾಡಿದೆ.
ವಿಡಿಯೊ ನೋಡಿ:
ಗುರುಗ್ರಾಮದಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಸುಮಾರು 75 ಮಿ.ಮೀ. ಮಳೆ ಸುರಿದಿದೆ. ಮಧ್ಯಾಹ್ನ 1ರಿಂದ 3 ಗಂಟೆಯ ನಡುವೆ ಅತಿ ಹೆಚ್ಚು ಮಳೆಯಾಗಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಅವರು ರಸ್ತೆ ಮಧ್ಯೆ ಗಂಟೆಗಟ್ಟಲೆ ಸಿಲುಕಿಕೊಂಡವು. ಮಕ್ಕಳು ಬಸ್‌ಗಳ ಒಳಗೆ ಹಲವು ಗಂಟೆಗಳ ಕಾಲ ಕಳೆದರು. ತಮ್ಮ ಮಕ್ಕಳನ್ನು ಪತ್ತೆ ಹಚ್ಚಲು ಪೋಷಕರು ಹರಸಾಹಸ ಪಟ್ಟಿದ್ದಾರೆ.
ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!
ಶಾಲೆಯಿಂದ ಮನೆಯತ್ತ ಹೊರಟಿದ್ದ 2ನೇ ತರಗತಿಯ ಮಗುವೊಂದು ಮಧ್ಯಾಹ್ನ 12:30ಕ್ಕೆ ಬಸ್ ಹತ್ತಿದರೆ, ರಾತ್ರಿ 8:30ಕ್ಕೆ ಮನೆ ತಲುಪಿದೆ. ಇನ್ನುಳಿದಂತೆ ಹಲವು ಶಾಲಾ ಮಕ್ಕಳು ಬಸ್‌ನಲ್ಲೇ ನೀರಿಲ್ಲದೆ, ಆಹಾರವಿಲ್ಲದೆ ಕುಳಿತು ಕೊಳ್ಳಬೇಕಾಯಿತು. ರಾಜೀವ್ ಚೌಕ್, ಇಫ್ಕೊ ಚೌಕ್, ಉದ್ಯೋಗ್ ವಿಹಾರ್, ಹಳೆ ದೆಹಲಿ ರಸ್ತೆ, ಮೆಹ್ರೌಲಿ ರಸ್ತೆ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿಯೂ ಜನ ಜೀವನ ಅಸ್ತವ್ಯಸ್ತಗೊಂಡಿತು.
ಗೋಸ್ ವಿತ್ ಗಬ್ಬರ್ ಎಂಬವರು, ಪ್ರವಾಹಕ್ಕೆ ಸಿಲುಕಿದ ರಸ್ತೆಯ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟ್ರಾಫಿಕ್ ಕಡಿಮೆ ಮಾಡಲು ಮತ್ತು ಒಳಚರಂಡಿ ಕೆಲಸವನ್ನು ಕೈಗೊಳ್ಳಲು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಕಾರ್ಪೊರೇಟ್ ಕಚೇರಿಗಳಿಗೆ ಸೂಚಿಸಲಾಯಿತು. ಪರಿಸ್ಥಿತಿ ತೀವ್ರಗೊಂಡ ಹಿನ್ನೆಲೆಯಲ್ಲಿ, ಗುರುಗ್ರಾಮ ಜಿಲ್ಲಾ ಆಡಳಿತವು ಸುರಕ್ಷತೆಗಾಗಿ ನಗರದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಆನ್‌ಲೈನ್ ತರಗತಿ ನಡೆಸಲು ಸೂಚನೆ ನೀಡಿದೆ.