ಲಖನೌ, ಮಾ. 4: ದೇಶದೆಲ್ಲೆಡೆ ಇಂದು ಹೋಳಿ ಸಂಭ್ರಮ. ಎಲ್ಲೆಡೆ ಈ ಬಣ್ಣದ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಈ ನಡುವೆ ಏಕತೆಯ ಸಂದೇಶವನ್ನು ಸಾರುವ ದೃಶ್ಯವೊಂದು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ವಿವಿಧ ಧರ್ಮಗಳ ಜನರು ಹಲವು ವರ್ಷಗಳಿಂದ ಒಟ್ಟಿಗೆ ಹೋಳಿ ಹಬ್ಬವನ್ನು ಆಚರಿಸುತ್ತಿರುವ ಪದ್ದತಿ ಉತ್ತರ ಪ್ರದೇಶದ ಪ್ರಸಿದ್ಧ ದೇವ ಶರೀಫ್ ದರ್ಗಾದಲ್ಲಿದ್ದು ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ದೇವ ಶರೀಫ್ ದರ್ಗಾದಲ್ಲಿ ಹಿಂದೂ-ಮುಸ್ಲಿಮರು ಸೇರಿ ಹೋಳಿ ಆಚರಿಸುತ್ತಿರುವ ವಿಡಿಯೊ ಗಮನ ಸೆಳೆಯುತ್ತಿದೆ. ಹಿಂದು- ಮುಸ್ಲಿಂ ಭೇದ ಭಾವ ಇಲ್ಲದೆ ಒಟ್ಟಾಗಿ ಹೋಳಿ ಹಬ್ಬವನ್ನು ಆಚರಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ.
ವಿಡಿಯೊ ನೋಡಿ:
ಸೂಫಿ ಸಂತ ವಾರಿಸ್ ಅಲಿ ಶಾ ಅವರ ದೇವಾಲಯ ಇದಾಗಿದ್ದು, ಲಖನೌದಿಂದ ಕೇವಲ 40 ಕಿಲೋ ಮೀಟರ್ ದೂರದಲ್ಲಿರುವ ಬಾರಾಬಂಕಿಯಲ್ಲಿದೆ. ಇದು ಹಲವು ಶತಮಾನಗಳಿಂದ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಹೋಳಿ ಆಡುತ್ತಿರುವ ಸ್ಥಳವಾಗಿದೆ. ಈ ವರ್ಷವೂ ಮಾರ್ಚ್ 4ರಂದು ಸಾವಿರಾರು ಮಂದಿ ಒಟ್ಟುಗೂಡಿ ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ.
ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಹಸುವಿಗೆ ಚಿಕನ್ ಮೋಮೋಸ್ ತಿನ್ನಿಸಿದ ಯುವಕ
ದರ್ಗಾದಲ್ಲಿ ಜನರು ಬಣ್ಣಗಳಿಂದ ಪರಸ್ಪರ ಎರಚಿ ಹೋಳಿ ಆಚರಿಸುವುದನ್ನು ವೈರಲ್ ವಿಡಿಯೊದಲ್ಲಿ ನೋಡಬಹುದು. ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಳ್ಳುವ ದೃಶ್ಯ ಸೆರೆಯಾಗಿದೆ. ಈ ದರ್ಗಾದಲ್ಲಿ ಹಳದಿ ಬಣ್ಣಕ್ಕೆ ವಿಶೇಷ ಮಹತ್ವವಿದೆ. ವಾರಿಸ್ ಅಲಿ ಶಾ ಅವರಿಗೆ ಹಳದಿ ಅತ್ಯಂತ ಪ್ರಿಯವಾದುದರಿಂದ, ಇಲ್ಲಿನ ಹೋಳಿಯಲ್ಲಿ ಹಳದಿ ಬಣ್ಣದ ಗುಲಾಲ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. 1917ರಲ್ಲಿ ನಿರ್ಮಿಸಲಾದ ಈ ದರ್ಗಾವು ಏಕತೆಗೆ ಒಂದು ಉತ್ತಮ ಉದಾಹರಣೆ.
ಮಾರ್ಚ್ 2 ರಂದು ಹಂಚಿಕೊಳ್ಳಲಾದ ಈ ವಿಡಿಯೊಕ್ಕೆ ಇಲ್ಲಿಯವರೆಗೆ 1.2 ಮಿಲಿಯನ್‌ಗಿಂತಲೂ ಹೆಚ್ಚು ವೀವ್ಸ್ ಬಂದಿವೆ. ಅನೇಕರು ಈ ವಿಡಿಯೊ ಬಗ್ಗೆ ಕಮೆಂಟ್ ಮಾಡಿದ್ದಾರೆ. ಒಬ್ಬರು, ʼʼಸಹೋದರತ್ವ ಚಿರಾಯುವಾಗಲಿʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, "ಪ್ರೀತಿಗಿಂತ ಧರ್ಮ ಮುಖ್ಯವಲ್ಲ" ಎಂದು ಬರೆದುಕೊಂಡಿದ್ದಾರೆ.