ಹೈದರಾಬಾದ್, ನ. 15: ವಿದ್ಯಾರ್ಥಿ ನಿಲಯದಲ್ಲಿ ಸರಿಯಾದ ಗುಣಮಟ್ಟದ ಊಟ, ಉಪಾಹಾರ ನೀಡುವುದಿಲ್ಲ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತದೆ. ಇದಕ್ಕಾಗಿ ಕೆಲವೆಡೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವಂತಹ ಘಟನೆಗಳೂ ನಡೆದಿವೆ. ತೆಲಂಗಾಣದ ಸಂಸ್ಥೆಯೊಂದರ ಹಾಸ್ಟೆಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾವಲುಗಾರನೇ ಬೇಯಿಸಿದ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಘಟನೆಯೊಂದು ನಡೆದಿದೆ. ಪಾಲಿಟೆಕ್ನಿಕ್ ಹಾಸ್ಟೆಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾವಲುಗಾರನೇ ತಿನ್ನುವ ಊಟದ ಮೇಲೆ ಈ ರೀತಿ ಅಸಹ್ಯಕರವಾಗಿ ವರ್ತಿಸಿದ್ದು, ಈ ಕಾರಣಕ್ಕಾಗಿ ತಕ್ಷಣವೇ ಸೇವೆಯಿಂದ ವಜಾಗೊಂಡಿದ್ದಾನೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.
ಪಾಲಿಟೆಕ್ನಿಕ್ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತಯಾರಿಸಿದ್ದ ಬೇಯಿಸಿದ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದವನನ್ನು ಹಾಸ್ಟೆಲ್ ಕಾವಲುಗಾರ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಈ ದೃಶ್ಯ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾವಲುಗಾರ ಮದ್ಯಪಾನ ಮಾಡಿ ಕುಡಿತದ ಮತ್ತಿನಲ್ಲಿ ಹೀಗೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕರ್ತವ್ಯದ ಸ್ಥಳವಾದ ಅಡುಗೆಮನೆಯ ಕೌಂಟರ್ ಮೇಲೆ ಮಲಗಿದ್ದ ಆತ, ತನ್ನ ಒಂದು ಕಾಲನ್ನು ವಿದ್ಯಾರ್ಥಿಗಳಿಗಾಗಿ ತಯಾರು ಮಾಡಿದ್ದ ದೊಡ್ಡ ಪಾತ್ರೆಯಲ್ಲಿದ್ದ ಬೇಯಿಸಿದ ಅನ್ನದ ಒಳಗೆ ಇರಿಸಿದ್ದಾನೆ. ವಿದ್ಯಾರ್ಥಿಗಳು ಇದನ್ನು ಗಮನಿಸಿದ್ದು ವಿಡಿಯೊ ಕೂಡ ರೆಕಾರ್ಡ್ ಮಾಡಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
ಅನ್ನ ಬೇಯಿಸಿದ ಕಡಾಯಿಗೆ ಆತ ಕಾಲು ಹಾಕಿದ ಕಾರಣ ಅನ್ನವನ್ನು ಎಸೆಯಬೇಕಾಯಿತು. ಕಾವಲುಗಾರ ಈ ಸ್ಥಿತಿಯಲ್ಲಿ ಮಲಗಿದ್ದನ್ನು ಕಂಡುಕೊಂಡ ವಿದ್ಯಾರ್ಥಿಗಳು ಆಹಾರ ಗುತ್ತಿಗೆ ದಾರರಿಗೆ ತಿಳಿಸಿದರು. ವಿಡಿಯೊ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ತ್ವರಿತವಾಗಿ ಕಾರ್ಯ ನಿರ್ವಹಿಸಿ ಕಾವಲುಗಾರನನ್ನು ತಕ್ಷಣ ವೇ ಕರ್ತವ್ಯದಿಂದ ತೆಗೆದುಹಾಕುವಂತೆ ಆದೇಶಿಸಿದರು. ಕಾಲೇಜು ಅಧಿಕಾರಿಗಳು ತಕ್ಷಣ ಈ ಆದೇಶವನ್ನು ಪಾಲಿಸಿ, ಕಾವಲುಗಾರನ ವಜಾವನ್ನು ದೃಢ ಪಡಿಸಿದರು.
ಇದನ್ನು ಓದಿ:Viral Video: ಹೊಟೇಲ್‌ಫುಡ್ ಪ್ರಿಯರೇ ಅಲರ್ಟ್... ಅಲರ್ಟ್! ಹೈ-ಫೈ ಹೊಟೇಲ್‌ನಲ್ಲಿ ಇಲಿಗಳದ್ದೇ ಕಾರು ಬಾರು
ಈ ಘಟನೆಯಿಂದಾಗಿ ಹಾಸ್ಟೆಲ್‌ನಲ್ಲಿನ ಆಹಾರ ಸುರಕ್ಷತೆಯ ನಿಯಮ ಹಾಗೂ ತಾತ್ಕಾಲಿಕವಾಗಿ ನೇಮಕಗೊಳ್ಳುವ ಸಿಬ್ಬಂದಿಯ ಮೇಲ್ವಿಚಾರಣೆಯ ಬಗ್ಗೆ ಚರ್ಚೆಗಳು ಎದ್ದಿವೆ. ವಿದ್ಯಾರ್ಥಿಗಳು ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರು ಸಿಬ್ಬಂದಿಯ ಸರಿಯಾದ ಮೇಲ್ವಿಚಾರಣೆಗೆ ಆಗ್ರಹಿಸಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು, "ತಿನ್ನುವ ಆಹಾರದ ಮುಂದೆ ಈ ರೀತಿ ವರ್ತಿಸಿದ್ದು ತಪ್ಪುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು "ಆಘಾತಕಾರಿ ದೃಶ್ಯ. ಹಾಸ್ಟೆಲ್‌ಗಳಲ್ಲಿ ನಿಯಮಿತ ಮೇಲ್ವಿಚಾರಣೆ ಮತ್ತು ಸರಿಯಾದ ಸಿಬ್ಬಂದಿ ಅಗತ್ಯ ಎಂದು ಈ ದೃಶ್ಯ ನೋಡಿಯೆ ಅರಿವಾಗಬೇಕುʼʼ ಎಂದು ಬರೆದುಕೊಂಡಿದ್ದಾರೆ. ಕೆಲವರು ಈ ಅನ್ನವನ್ನು ಅವನಿಗೇ ತಿನ್ನಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.