ಶಿಮ್ಲಾ, ಡಿ.10: ಹೆಚ್ಚಿನವರಿಗೆ ತಮ್ಮ ಮದುವೆಯನ್ನು ಗ್ರ್ಯಾಂಡ್ ಆಗಿ ಮಾಡಿಕೊಳ್ಳಬೇಕು ಎಂಬ ಕನಸು ಇರುತ್ತದೆ. ಹೀಗಾಗಿ ಮದುವೆ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಭಾಗಿಯಾಗುತ್ತಾರೆ. ಇಂತಹ ಸಂಭ್ರಮದ ವಾತಾವರಣ ಮಧ್ಯೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭೀಕರ ದುರಂತವೊಂದು ನಡೆದಿದೆ. ಮದುವೆ ಸಮಾರಂಭವೊಂದರಲ್ಲಿ ನೂರಾರು ಜನರು ಕುಳಿತಿದ್ದ ಛಾವಣಿ ಇದ್ದಕ್ಕಿದ್ದಂತೆ ಕುಸಿತು ಬಿದ್ದಿದ್ದು ಈ ದುರಂತದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆಯ ದೃಶ್ಯಾವಳಿ ಸದ್ಯ ಭಾರಿ ವೈರಲ್ (Viral Video) ಆಗಿದೆ.
ಮದುವೆ ಸಮಾರಂಭದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಕೆಲವು ಅತಿಥಿಗಳು ಡ್ಯಾನ್ಸ್ ಮಾಡುತ್ತಿದ್ದರೆ ಇನ್ನು ಕೆಲವರು ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಮನೆಯ ಛಾವಣಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಚಂಬಾ ಜಿಲ್ಲೆಯ ಚುರಾ ವಿಧಾನಸಭಾ ಕ್ಷೇತ್ರದ ಜುಂಗ್ರಾ ಗ್ರಾಮ ಪಂಚಾಯತ್‌ನ ಭಾಗವಾಗಿರುವ ಶಹ್ವಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಛಾವಣಿ ಕುಸಿದು ಕೆಲವು ಜನರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ವಿಡಿಯೊ ನೋಡಿ:
ವರದಿಯ ಪ್ರಕಾರ ಸುಮಾರು ನೂರು ಜನರು ಛಾವಣಿಯ ಮೇಲೆ ಸೇರಿದ್ದರು. ಹೆಚ್ಚಿನ ಜನರು ಏಕಕಾಲಕ್ಕೆ ನೃತ್ಯ ಮಾಡುತ್ತಿದ್ದರಿಂದ, ಛಾವಣಿ ಭಾರ ತಾಳಲಾರದೆ ಹಠಾತ್ತನೆ ಕುಸಿದು ಬಿತ್ತು. ಈ ಇಡೀ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಘಟನೆಯಲ್ಲಿ ಹೆಚ್ಚಿನವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ಚಂಬಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದ್ದು ಛಾವಣಿ ಕುಸಿತದ ನಿಖರ ಕಾರಣಗಳ ಕುರಿತು ಅಧಿಕಾರಿಗಳು ಪರಿಶೀಲನೆ ಮಾಡಲಿದ್ದಾರೆ.
ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್ ಕೊಟ್ಟ ಹಿಂದೂ ವ್ಯಕ್ತಿ!
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಕೂಡ ವೇದಿಕೆ ಕುಸಿದು ಬಿದ್ದ ಘಟನೆ ನಡೆದಿತ್ತು. ಮದುವೆ ಕಾರ್ಯಕ್ರಮ ಒಂದರಲ್ಲಿ ನವದಂಪತಿ ಮತ್ತು ಅತಿಥಿಗಳು ವೇದಿಕೆ ಮೇಲೆ ಫೋಟೊ ತೆಗೆಸಿಕೊಳ್ಳುತ್ತಿದ್ದಾಗಲೇ ಅದು ಕುಸಿದು ಬಿದ್ದಿತ್ತು. ಇದರ ಬೆನ್ನಲ್ಲೆ ಈ ಘಟನೆ ಮತ್ತೆ ನಡೆದಿದೆ. ಸದ್ಯ ಈ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಹಲವು ರೀತಿಯ ಕಮೆಂಟ್ ಬರತೊಡಗಿದೆ.
ಬಳಕೆದಾರರೊಬ್ಬರು ಅಗತ್ಯಕ್ಕಿಂತ ಹೆಚ್ಚು ಜನ ಹತ್ತಿದ್ದಲ್ಲದೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಹೀಗಾಗಿ ವೇದಿಕೆ ಕುಸಿದು ಬಿದ್ದಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ವೇದಿಕೆ ಕುಸಿಯುತ್ತಿರುವ ಘಟನೆಗಳೇ ಹೆಚ್ಚಾಗಿ ನಡೆಯುತ್ತಿದೆ. ಹಾಗಾಗಿ ಸೂಕ್ತ ಆಯೋಜಕರನ್ನು ನೇಮಿಸಿ ಎಂದು ಕಮೆಂಟ್ ಮಾಡಿದ್ದಾರೆ.