ನವದೆಹಲಿ, ಮೇ 20: ಪ್ರಧಾನಿ ನರೇಂದ್ರ ಮೋದಿ (PM Narendra Modi) ರೋಮ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Italy PM Giorgia Meloni) ಅವರಿಗೆ ಪಾರ್ಲೆ ಮೆಲೋಡಿ ಚಾಕೊಲೇಟ್ (ಟಾಫಿ) ಪ್ಯಾಕೆಟ್ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೀಡಿದ ಕೆಲವೇ ಗಂಟೆಗಳಲ್ಲಿ ಮೆಲೋಡಿ ಟಾಫಿ ಮಾರಾಟದಲ್ಲಿ ಹಠಾತ್ ಏರಿಕೆ ಕಂಡು ಬಂದಿದೆ. ಬ್ಲಿಂಕ್‌ಇಟ್, ಸ್ವಿಗ್ಗಿ, ಇನ್‌ಸ್ಟಾಮಾರ್ಟ್ ಮತ್ತು ಝೆಪ್ಟೊ ಮುಂತಾದ ಆನ್‌ಲೈನ್ ಮಾರ್ಕೆಟ್‌ನಲ್ಲಿ ಶೀಘ್ರದಲ್ಲೇ ಸ್ಟಾಕ್ ಖಾಲಿಯಾಗಿದೆ ಎನ್ನುವ ಸಂದೇಶ ಹೊರ ಬಿದ್ದಿದೆ.
ಪ್ರಧಾನಿ ಮೋದಿ ಮತ್ತು ಮೆಲೋನಿ ಅವರೊಂದಿಗಿನ ವಿಡಿಯೊ ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸುತ್ತಿರುತ್ತದೆ. ಇದೀಗ ಪ್ರಧಾನಿ ಮೋದಿ ಇಟಲಿಗೆ ಭೇಟಿ ನೀಡಿದ್ದು, ನೆಟ್ಟಿಗರು ಮೆಲೋಡಿ ಮೀಮ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಈ ಬೆಳವಣಿಗೆ ಸಂಭವಿಸಿದೆ.
ಮೆಲೋನಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪ್ರಧಾನಿ ಮೋದಿ ತಮ್ಮ ರೋಮ್ ಭೇಟಿಯ ಸಮಯದಲ್ಲಿ ಅವರಿಗೆ ಮೆಲೋಡಿ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡುತ್ತಿರುವುದನ್ನು ತೋರಿಸಲಾಗಿದೆ. ಉಡುಗೊರೆಗೆ ಧನ್ಯವಾದಗಳು ಎಂದು ಮೆಲೋನಿ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು.
ವಿಡಿಯೊ ಇಲ್ಲಿದೆ:
ನಾರ್ವೆಯ ಅತ್ಯುನ್ನತ ಗೌರವ ಗ್ರ್ಯಾಂಡ್ ಕ್ರಾಸ್ ಸ್ವೀಕರಿಸಿದ ನರೇಂದ್ರ ಮೋದಿ: ಪ್ರಧಾನಿಗಿದು 32ನೇ ಅಂತಾರಾಷ್ಟ್ರೀಯ ಗೌರವ
ಅಂದಹಾಗೆ ಮೆಲೋಡಿ ಟಾಫಿ, ಪಾರ್ಲೆ ಪ್ರಾಡಕ್ಟ್ಸ್‌ನಿಂದ ತಯಾರಿಸಲ್ಪಟ್ಟ ಒಂದು ಕ್ಯಾರಮೆಲ್ ಕ್ಯಾಂಡಿ. ಭಾರತದ ಅತ್ಯಂತ ಹಳೆಯ ಬಿಸ್ಕೇಟ್ ಬ್ರ್ಯಾಂಡ್‌ಗಳಲ್ಲಿ ಎರಡನೇ ಸ್ಥಾನದಲ್ಲಿರುವ ಪಾರ್ಲೆ, ತನ್ನದೇ ಹೆಸರಿನ ಐತಿಹಾಸಿಕ ಸಿಹಿ ಬಿಸ್ಕೆಟ್‌ಗೆ (ಪಾರ್ಲೆ-ಜಿ) ದೇಶಾದ್ಯಂತ ಹೆಸರುವಾಸಿ. ಮಹಾರಾಷ್ಟ್ರದ ಮುಂಬೈನಲ್ಲಿ ಸ್ಥಾಪನೆಯಾದ ಈ ಕಂಪನಿಯು ಬಿಸ್ಕೆಟ್ ಮಾತ್ರವಲ್ಲದೆ, ವೇಫರ್‌ಗಳು, ತಿಂಡಿಗಳು, ಚಾಕೊಲೇಟ್‌ಗಳು, ಟಾಫಿಗಳು ಸೇರಿ ಇನ್ನೂ ಹಲವು ಖಾದ್ಯ ಉತ್ಪನ್ನಗಳನ್ನು ತಯಾರಿಸುತ್ತದೆ. ಇವುಗಳಲ್ಲಿ ಒಂದಾದ ಜನಪ್ರಿಯ ಮೆಲೊಡಿ ಟಾಫಿಯನ್ನು ಮೊದಲ ಬಾರಿಗೆ 1983ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು.
ಈ ಚಾಕೊಲೇಟ್ ತನ್ನ ವಿಶಿಷ್ಟವಾದ ಡ್ಯುಯಲ್ ಟೆಕ್ಸ್ಚರ್‌ಗಾಗಿ ಹೆಸರುವಾಸಿ. ಇದು ಹೊರಭಾಗದಲ್ಲಿ ಮೃದು ಹಾಗೂ ಗಟ್ಟಿಯಾದ ಕ್ಯಾರಮೆಲ್ ಪದರವನ್ನು ಹೊಂದಿದ್ದು, ಒಳಗಡೆ ಜಿಗುಟಾದ ಚಾಕೊಲೇಟ್ ಹೂರಣವನ್ನು ಒಳಗೊಂಡಿರುತ್ತದೆ. ಈ ಟಾಫಿಯ ಮುಖ್ಯ ಪದಾರ್ಥಗಳಲ್ಲಿ ಸಕ್ಕರೆ, ಲಿಕ್ವಿಡ್ ಗ್ಲೂಕೋಸ್, ರಿಫೈನ್ಡ್ ಪಾಮ್ ಆಯಿಲ್, ಕೋಕೋ ಸಾಲಿಡ್ಸ್, ಸೋಯ್ ಲೆಸಿಥಿನ್ ಹಾಗೂ ಕೃತಕ ವೆನಿಲ್ಲಾ ಫ್ಲೇವರಿಂಗ್ ಸೇರಿದೆ.
ಮೋದಿ ಮತ್ತು ಮೆಲೋನಿ ಹೆಸರಿನ ಮಿಶ್ರ ರೂಪವೇ ಮೆಲೋಡಿ. ಇಬ್ಬರೂ ನಾಯಕರು ಭೇಟಿಯಾದಾಗಲೆಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ಮೆಲೋಡಿ ಮೀಮ್ಸ್ ವೈರಲ್ ಆಗುತ್ತವೆ.