ಪಣಜಿ: ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ (Goa Health Minister) ಸೋಮವಾರ ಹಿರಿಯ ವೈದ್ಯರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸಚಿವ ವೈದ್ಯರ ಬಳಿ ಕ್ಷಮೆ ಕೇಳಿದ್ದಾರೆ. ನನ್ನ ಉದ್ದೇಶ ಸರಿಯಾಗಿತ್ತು, ಆದರೆ ನನ್ನ ಮಾತುಗಳು ತಪ್ಪಾಗಿದ್ದವು ಎಂದು ಅವರು ಹೇಳಿದ್ದಾರೆ. ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್) ಮುಖ್ಯ ವೈದ್ಯಾಧಿಕಾರಿ ಡಾ. ರುದ್ರೇಶ್ ಕುಟ್ಟಿಕರ್ ವಿರುದ್ಧ ರಾಣೆ ವಾಗ್ದಾಳಿ ನಡೆಸುತ್ತಿರುವ ವೀಡಿಯೊ ವೈರಲ್ ಆದ ನಂತರ ಈ ಹೇಳಿಕೆಗಳು ಬಂದಿದೆ.
ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಪ್ರತಿಕ್ರಿಯಿಸಿದ ರೀತಿ ಸೂಕ್ತವಲ್ಲ ಎಂದು ನಾನು ಒಪ್ಪುತ್ತೇನೆ. ನಾನು ಅವರಿಗೆ ಪ್ರತ್ಯೇಕವಾಗಿ ಕರೆ ಮಾಡಿ ಮಾತನಾಡಬಹುದಿತ್ತು. ಅವರ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಮತ್ತೊಮ್ಮೆ ವೈದ್ಯರು ಮತ್ತು ಅವರ ಕುಟುಂಬದಲ್ಲಿ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದರು. ಮುಂದುವರಿದು ನಾನು ಭಾರತೀಯ ವೈದ್ಯಕೀಯ ಸಂಘ ಮತ್ತು ಮುಖ್ಯ ವೈದ್ಯಾಧಿಕಾರಿಯಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ರೋಗಿಯ ನೋವನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ನಾನು ಅವರ ಪರವಾಗಿ ನಿಂತಿದ್ದೇನೆ. ನನ್ನ ತಾಯಿ ಸ್ವತಃ ಕ್ಯಾನ್ಸರ್ ರೋಗಿ, ಆದ್ದರಿಂದ ಅವರು ಏನನ್ನು ಎದುರಿಸುತ್ತಾರೆಂದು ನನಗೆ ತಿಳಿದಿದೆ. ಇದನ್ನು ನಾನು ರಾಜಕೀಯಗೊಳಿಸಲು ಬಯಸುವುದಿಲ್ಲ" ಎಂದು ಸಚಿವರು ಹೇಳಿದರು.
ಶನಿವಾರ (ಜೂನ್ 7) ರಾಣೆ ಜಿಎಂಸಿಎಚ್‌ಗೆ ದಿಢೀರ್ ರೇಡ್ ಮಾಡಿದ ಸಚಿವರು ಡಾ. ಕುಟ್ಟಿಕರ್ ರೋಗಿಗಳೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಸ್ಥಳದಲ್ಲೇ ಅವರನ್ನು ಅಮಾನತುಗೊಳಿಸಲು ಆದೇಶ ನೀಡಿದ್ದರು. ವೈರಲ್ ಆಗಿರುವ ವಿಡಿಯೋದಲ್ಲಿ, ರಾಣೆ ವೈದ್ಯರನ್ನು ಗದರಿಸುತ್ತಾ, "ನೀವು ನಿಮ್ಮ ನಾಲಿಗೆಯನ್ನು ನಿಯಂತ್ರಿಸಲು ಕಲಿಯಿರಿ, ನೀವು ವೈದ್ಯರು. ನಾನು ಸಾಮಾನ್ಯವಾಗಿ ನನ್ನ ತಾಳ್ಮೆ ಕಳೆದುಕೊಳ್ಳುವುದಿಲ್ಲ, ಆದರೆ ನೀವು ನಿಮ್ಮಂತೆಯೇ ವರ್ತಿಸಬೇಕು. ಎಷ್ಟೇ ಹೊರೆಯಾಗಿದ್ದರೂ, ನೀವು ರೋಗಿಗಳೊಂದಿಗೆ ಸರಿಯಾಗಿ ವರ್ತಿಸಬೇಕು" ಎಂದು ಹೇಳುವುದನ್ನು ಕಾಣಬಹುದು.
ಈ ಸುದ್ದಿಯನ್ನೂ ಓದಿ: Viral Video ರಾಜಮನೆತನದ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ವಿಡಿಯೋ ವೈರಲ್; ನೆಟ್ಟಿಗರು ವಾಕರಿಕೆ ಬರುತ್ತೆ ಅಂತಾ ಅಂದಿದ್ದೇಕೆ?
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಗೋವಾ ಶಾಖೆಯು ಸಚಿವರ ನಡವಳಿಕೆಯನ್ನು ಖಂಡಿಸಿ, ಇದನ್ನು ಅವಮಾನಕರ ಕೃತ್ಯ ಎಂದು ಕರೆದಿದೆ ಮತ್ತು ಅಮಾನತುಗೊಳಿಸುವಿಕೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ. ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪರಿಸ್ಥಿತಿಯನ್ನು ಶಾಂತಗೊಳಿಸಲು ಮಧ್ಯಪ್ರವೇಶಿಸಿ ಅಮಾನತು ಆದೇಶವನ್ನು ರದ್ದುಗೊಳಿಸಿದರು, ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.