ಭೋಪಾಲ್: ಮಧ್ಯ ಪ್ರದೇಶದ (Madhya Pradesh) ಗುನಾ (Guna) ಜಿಲ್ಲೆಯಲ್ಲಿ 35 ವರ್ಷದ ದೀಪಕ್ ಮಹಾವರ್ ಎಂಬಾತ ಕುತ್ತಿಗೆಗೆ ವಿಷಕಾರಿ ಕಾಳಿಂಗ ಸರ್ಪವನ್ನು (Venomous Cobra ) ಸುತ್ತಿಕೊಂಡು ಬೈಕ್ ಚಲಾಯಿಸುತ್ತಿದ್ದಾಗ, ಹಾವು ಕಡಿದು(Snake Bite) ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಈ ಘಟನೆಗೂ ಮುನ್ನ ದೀಪಕ್ ಕುತ್ತಿಗೆಗೆ ಹಾವನ್ನು ಸುತ್ತಿಕೊಂಡು ತಿರುಗಾಡುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಜೆಪಿ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿದ್ದ ದೀಪಕ್, ಸಾವಿರಾರು ಹಾವುಗಳನ್ನು ರಕ್ಷಿಸಿದ್ದಾರೆ. ಆ ಮೂಲಕ ಎಲ್ಲರಿಂದಲೂ ಗುರುತಿಸಲ್ಪಟ್ಟಿದ್ದರು. ಇತ್ತೀಚೆಗೆ ಕಾಳಿಂಗ ಸರ್ಪವನ್ನು ಹಿಡಿದು ಗಾಜಿನ ಪಾತ್ರೆಯಲ್ಲಿ ಇರಿಸಿದ್ದರು. ಶ್ರಾವಣ ಮಾಸದ ಮೆರವಣಿಗೆಯಲ್ಲಿ ತೋರಿಸಲು ಈ ಹಾವನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಘಟನೆಯ ದಿನ, ದೀಪಕ್ ತನ್ನ ಮಕ್ಕಳಾದ ರೌನಕ್ (12) ಮತ್ತು ಚಿರಾಗ್ (14) ಅವರನ್ನು ಶಾಲೆಗೆ ಬಿಟ್ಟು ಬೈಕ್‌ನಲ್ಲಿ ಹೋಗುವಾಗ ಕುತ್ತಿಗೆಗೆ ಹಾವನ್ನು ಹಾರದಂತೆ ಸುತ್ತಿಕೊಂಡಿದ್ದರು. ಆ ಸಂದರ್ಭದಲ್ಲಿ, ಕಾಳಿಂಗ ಸರ್ಪವು ಆತನನ್ನು ಆಕಸ್ಮಿಕವಾಗಿ ಕಡಿದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆಯ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಷದ ಪರಿಣಾಮವನ್ನು ತಗ್ಗಿಸಲು ಆ್ಯಂಟಿವೆನಮ್ ಔಷಧ ನೀಡಲಾಗಿತ್ತಾದರೂ, ವೈದ್ಯಕೀಯ ಸಹಾಯದಲ್ಲಿ ವಿಳಂಬವಾದ ಕಾರಣ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಈ ಸುದ್ದಿಯನ್ನು ಓದಿ:Viral Video: ಕನ್ನ ಹಾಕಲು ಹೋಗಿ ಭರ್ಜರಿ ಗೊರಕೆ ಹೊಡೆದು ನಿದ್ದೆ! ಖದೀಮನ ವಿಡಿಯೊ ನೋಡಿ
ದೀಪಕ್‌ನ ಪತ್ನಿ ಈ ಹಿಂದೆಯೇ ನಿಧನರಾಗಿದ್ದು, ಈಗ ಆತನ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮತ್ತು ದಿಗ್ಭ್ರಮೆಯನ್ನುಂಟು ಮಾಡಿದೆ. ಹಾವುಗಳ ರಕ್ಷಣೆಯಲ್ಲಿ ತೊಡಗಿದ್ದ ದೀಪಕ್‌ನ ಈ ದುರಂತ ಸಾವು, ವನ್ಯಜೀವಿ ಸಂರಕ್ಷಣೆಯ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳ ಮಹತ್ವವನ್ನು ಎತ್ತಿ ತೋರಿಸಿದೆ.